ಬಂಧಿತ 24 ನುಸುಳುಕೋರರ ಪೈಕಿ 12 ಮಂದಿಯನ್ನು ಹೆಚ್ಚಿನ ತನಿಖೆಗಾಗಿ ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಉಳಿದ 12 ಮಂದಿಯನ್ನು ಪಾಕಿಸ್ತಾನ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 2 ರಂದು, ಜಮ್ಮುವಿನ ಮಂಗುಚೆಕ್ ಪ್ರದೇಶದ ಖೋರಾ ಪೋಸ್ಟ್ ಬಳಿ 45 ವರ್ಷದ ವ್ಯಕ್ತಿಯೊಬ್ಬ ಪಾಕಿಸ್ತಾನದ ತುಗ್ಲಿಯಾಲ್‌ಪುರ ಪೋಸ್ಟ್‌ನಿಂದ ಭಾರತದ ಕಡೆಗೆ ನುಸುಳಿದ ನಂತರ ಆತನನ್ನು ಹತ್ಯೆ ಮಾಡಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಕಾನೂನುಬಾಹಿರ ಕೃತ್ಯಗಳಿಗಾಗಿ ದುಷ್ಕರ್ಮಿಗಳು ಹೆಚ್ಚಾಗಿ ಬಳಸುತ್ತಿರುವ ಡ್ರೋನ್‌ಗಳು ಭದ್ರತೆಗೆ ಬೆದರಿಕೆಯಾಗಿ ಹೊರಹೊಮ್ಮಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತದಲ್ಲಿ ಪಂಜಾಬ್ ಗಡಿಯು ಕಳ್ಳಸಾಗಣೆ ಚಟುವಟಿಕೆಗಳಲ್ಲಿ ಡ್ರೋನ್‌ಗಳ ಅಕ್ರಮ ಬಳಕೆಗೆ ಹಾಟ್‌ಸ್ಪಾಟ್ ಆಗಿದೆ. ಜುಲೈ 31ರವರೆಗೆ 134 ಡ್ರೋನ್‌ಗಳನ್ನು ಬಿಎಸ್ ಎಫ್ ಪಡೆ ಯೋಧರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಕಳ್ಳಸಾಗಣೆ ಕಾರ್ಯಾಚರಣೆಯನ್ನು ಗಮನಾರ್ಹವಾಗಿ ತಡೆಗಟ್ಟಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಪಡೆಗಳು ಪಾಕಿಸ್ತಾನದಿಂದ ಭಾರತಕ್ಕೆ ಕಳ್ಳಸಾಗಣೆಯಾಗುತ್ತಿದ್ದ 164 ಕಿಲೋಗ್ರಾಂಗಳಷ್ಟು ಹೆರಾಯಿನ್ ವಶಪಡಿಸಿಕೊಂಡಿದ್ದು, ಈ ವರ್ಷದ ಜುಲೈ 31 ರ ವೇಳೆಗೆ 46 ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.