ನವದೆಹಲಿ: ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುವುದಕ್ಕೆ ಆಧಾರ್ ಕಾರ್ಡ್ ಗಳನ್ನು ಮಾಡಿಕೊಡುತ್ತಿದ್ದ ಜಾಲ ರಾಜಸ್ಥಾನದಲ್ಲಿ ಪತ್ತೆಯಾಗಿದ್ದು, ಸಿಬಿಐ ಎಫ್ಐಆರ್ ದಾಖಲಿಸಿದೆ. 25,000 ರೂಗಳಿಗೆ ನಕಲಿ ದಾಖಲೆ, ಬೆರಳಚ್ಚು, ರೆಟಿನಾ ಸ್ಕ್ಯಾನ್ ಮೂಲಕ ಆಧಾರ್ ಕಾರ್ಡ್ ಮಾಡಿಕೊಡುವ ಜಾಲ ಇದಾಗಿದೆ.
ಪ್ರಕರಣದ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಶಾಲಾ ಮಕ್ಕಳ ರೆಟಿನಾ ಸ್ಕ್ಯಾನ್ ಮಾಡಿ, ಬೆರಳಚ್ಚು ಪಡೆದುಕೊಂಡು ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಚೋರ್‌ನಲ್ಲಿರುವ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇಲಾಖೆಯ ಪ್ರೋಗ್ರಾಮರ್ ಮನೋಹರ್ ಲಾಲ್ ಅವರು ಪೊಲೀಸರಿಗೆ ದೂರು ನೀಡಿದ ನಂತರ ಸುದ್ದಿ ವರದಿಯ ಮೂಲಕ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನದ ವಿವಿಧ ಜಿಲ್ಲೆಗಳಲ್ಲಿ ನಕಲಿ ಆಧಾರ್ ಕಾರ್ಡ್‌ಗಳ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದರು.
ಸಂಚೋರ್ ಭಾರತ-ಪಾಕಿಸ್ತಾನ ಗಡಿಯಿಂದ 150 ಕಿಮೀ ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಸುದ್ದಿ ವರದಿಯಾದ ಮೂರು ದಿನಗಳಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಬಗ್ಗೆ ಸಿಬಿಐ ತನಿಖೆಗೆ ಕೋರಿದೆ.
ರಾಜಸ್ಥಾನ ಸರ್ಕಾರವು ಜುಲೈ 9 ರಂದು ಕೇಂದ್ರ ತನಿಖಾ ಸಂಸ್ಥೆಗೆ ಪ್ರಕರಣವನ್ನು ವರ್ಗಾಯಿಸಿತು, ಅದನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಜುಲೈ 30 ರಂದು ಸಿಬಿಐಗೆ ರವಾನಿಸಿದೆ ಎಂದು ಅವರು ಹೇಳಿದರು.