ಪೋಂಗ್ಯಾಂಗ್ : ಉತ್ತರ ಕೊರಿಯಾವು ತನ್ನ ದಕ್ಷಿಣ ಗಡಿಯಲ್ಲಿ 250 ಬ್ಯಾಲಿಸ್ಟಿಕ್ ಕ್ಷಿಪಣಿ ಲಾಂಚರ್ ಗಳನ್ನು ನಿಯೋಜಿಸಿದ್ದು ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಇವು ಬಲಿಷ್ಟ ಖಡ್ಗಗಳಾಗಿವೆ ಎಂದು ಅಧ್ಯಕ್ಷ ಕಿಮ್ ಜಾಂಗ್ ಉನ್ ಬಣ್ಣಿಸಿದ್ದಾರೆ.
ಅಮೆರಿಕ ನೇತೃತ್ವದ ಮೈತ್ರಿಕೂಟವು ಪರಮಾಣು ಶಕ್ತಿ ಆಧಾರಿತ ಬಣಗಳಾಗಿ ಪರಿವರ್ತನೆಗೊಂಡಿರುವುದರಿಂದ ದೇಶವು ಗಮನಾರ್ಹ ಮತ್ತು ಕಾರ್ಯತಂತ್ರದ ಬದಲಾವಣೆಯನ್ನು ಎದುರಿಸುತ್ತಿದೆ.
ಆದ್ದರಿಂದ ಶತ್ರುಗಳನ್ನು ಎದುರಿಸಲು ನಮ್ಮ ಸಶಸ್ತ್ರ ಪಡೆಗಳ ಬಲವರ್ಧನೆಯನ್ನು ಮುಂದುವರಿಸುವ ಅಗತ್ಯವಿದೆ ಎಂದು ಕಿಮ್ ಜಾಂಗ್ ಹೇಳಿದ್ದಾರೆ. ರವಿವಾರ ರಾಜಧಾನಿ ಪೋಂಗ್ಯಾಂಗ್ನಲ್ಲಿ ನಡೆದ ವಿಶೇಷ `ವರ್ಗಾವಣೆ' ಸಮಾರಂಭದಲ್ಲಿ ಮೊಬೈಲ್(ಚರ) ಕ್ಷಿಪಣಿ ಉಡಾವಣಾ ವ್ಯವಸ್ಥೆಗಳನ್ನು ಪ್ರದರ್ಶಿಸಲಾಯಿತು ಎಂದು ಸರಕಾರಿ ಸ್ವಾಮ್ಯದ ಕೆಸಿಎನ್‌ಎ ಸುದ್ದಿಸಂಸ್ಥೆ ವರದಿ ಮಾಡಿದೆ.
ಕ್ಷಿಪಣಿ ಲಾಂಚರ್ ಗಳು ಅತ್ಯಾಧುನಿಕ ಯುದ್ಧತಂತ್ರದ ದಾಳಿಯ ಅಸ್ತ್ರಗಳಾಗಿವೆ. ಪ್ರತೀ ಲಾಂಚರ್ ಗಳನ್ನೂ 4 ಕ್ಷಿಪಣಿಗಳನ್ನು ಹಿಡಿದಿಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಉಭಯ ಕೊರಿಯಾಗಳ ನಡುವಿನ ಸಂಬಂಧ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹದಗೆಟ್ಟಿದ್ದು ಉತ್ತರ ಕೊರಿಯಾವು ಬ್ಯಾಲಿಸ್ಟಿಕ್ ಕ್ಷಿಪಣಿ ಸೇರಿದಂತೆ ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಹೆಚ್ಚಿಸಿದ ಜತೆಗೆ, ದಕ್ಷಿಣ ಕೊರಿಯಾದ ಮೇಲೆ ತ್ಯಾಜ್ಯ, ಕಸಕಡ್ಡಿ ತುಂಬಿದ ಬಲೂನುಗಳನ್ನು ಪ್ರಯೋಗಿಸುತ್ತಿದೆ. ಇದಕ್ಕೆ ಪ್ರತಿಯಾಗಿ ದಕ್ಷಿಣ ಕೊರಿಯಾವು ಉತ್ತರ ಕೊರಿಯಾದ ಕೃತ್ಯಗಳನ್ನು ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಜತೆಗೆ, ಉದ್ವಿಗ್ನತೆ ಕಡಿಮೆ ಮಾಡುವ ಮಿಲಿಟರಿ ಒಪ್ಪಂದವನ್ನು ಅಮಾನತುಗೊಳಿಸಿದೆ ಮತ್ತು ಗಡಿಭಾಗದ ಬಳಿ ಮಿಲಿಟರಿ ಸಮರಾಭ್ಯಾಸ ಹೆಚ್ಚಿಸಿದೆ.