ಕೋಝಿಕ್ಕೋಡ್: ಬ್ಯಾಂಕ್ ಆಫ್ ಮಹಾರಾಷ್ಟ್ರದ ವಡಕರ ಶಾಖೆಯಲ್ಲಿ ಒತ್ತೆ ಇಟ್ಟಿದ್ದ 26 ಕೆಜಿ ಚಿನ್ನಾಭರಣದೊಂದಿಗೆ ಮ್ಯಾನೇಜರ್, ಮೂಲತಃ ತಮಿಳುನಾಡು ನಿವಾಸಿ ಮಧು ಜಯಕುಮಾರ್ ನಾಪತ್ತೆಯಾಗಿದ್ದಾರೆ.
ಬ್ಯಾಂಕ್ ಮ್ಯಾನೇಜರ್ 18 ಕೋಟಿ ರೂಪಾಯಿ ವಂಚನೆ ನಡೆಸಿರುವುದು ಈ ಮೂಲಕ ಬೆಳಕಿಗೆ ಬಂದಿದೆ.
ತಮಿಳುನಾಡಿನ ಮೇಟುಪಾಳ್ಯಂ ಮೂಲದ ಮಧುಜಯಕುಮಾರ್ ಕಳೆದ ಮೂರು ವರ್ಷಗಳಿಂದ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಕಳೆದ ತಿಂಗಳು ಜಯಕುಮಾರ್ ಅವರನ್ನು ಕೊಚ್ಚಿ ಪಾಲರಿವಟ್ಟಂ ಶಾಖೆಗೆ ವರ್ಗಾವಣೆ ಮಾಡಲಾಗಿದ್ದು, ವಡಕರದಲ್ಲಿ ಹೊಸದಾಗಿ ನಿಯೋಜನೆಗೊಂಡಿರುವ ಪಾನೂರಿನ ಇರ್ಷಾದ್ ಅವರು ನಡೆಸಿದ ತಪಾಸಣೆಯಲ್ಲಿ ವಂಚನೆ ಬೆಳಕಿಗೆ ಬಂದಿದೆ.
ಗ್ರಾಹಕರು ಬ್ಯಾಂಕ್‍ನಲ್ಲಿ ಗಿರವಿ ಇಟ್ಟಿದ್ದ ಚಿನ್ನದ ಒಡವೆಗಳ ಬದಲಿಗಿ ನಕಲಿ ಒಡವೆ ಇರಿಸಿರುವುದು ಕಂಡುಬಂದಿದೆ. ತಪಾಸಣೆ ವೇಳೆ ಬ್ಯಾಂಕ್‍ನಿಂದ 26 ಕೆ.ಜಿ.ಚಿನ್ನ ನಾಪತ್ತೆಯಾಗಿದೆ ಎಂದು ಹೇಳಲಾಗಿದೆ. ಇಷ್ಟು ಪ್ರಮಾಣದಲ್ಲಿ ಒತ್ತೆ ಇಟ್ಟಿದ್ದ ಚಿನ್ನದ ಆಭರಣಗಳು ನಾಪತ್ತೆಯಾಗಿವೆ. ಸುಮಾರು 17 ಕೋಟಿ 29 ಲಕ್ಷ ರೂಪಾಯಿ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಮೊತ್ತದ ವಂಚನೆ ಹಿಂದೆ ಮಧುಜಯಕುಮಾರ್ ಒಬ್ಬರು ಮಾತ್ರವಲ್ಲ, ಯಾರದೋ ಸಹಾಯ ಲಭಿಸಿರಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.
ಪಾಲಾರಿವಟ್ಟಕ್ಕೆ ವರ್ಗಾವಣೆಗೊಂಡರೂ ಮಧುಜಯಕುಮಾರ್ ಅಧಿಕಾರ ವಹಿಸಿಕೊಂಡಿರಲಿಲ್ಲ. ಹಗರಣ ಹೊರಬಿದ್ದಿರುವ ಸುಳಿವು ಸಿಕ್ಕಾಗ ನಾಪತ್ತೆಯಾಗಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಇರ್ಷಾದ್ ನೀಡಿದ ದೂರಿನ ಮೇರೆಗೆ ವಡಗÀರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಧು ಜಯಕುಮಾರ್ ಅವರ ಪತ್ತೆಗೆ ತನಿಖೆ ನಡೆಸಲಾಗುವುದು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.