ಶ್ರೀನಗರ: ಚುನಾವಣಾ ಆಯೋಗವು ಕಾಶ್ಮೀರ ಕಣಿವೆಯಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ 298 ತುಕಡಿಗಳ ಅರೆಸೇನಾ ಪಡೆಯನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಶ್ರೀನಗರ: ಚುನಾವಣಾ ಆಯೋಗವು ಕಾಶ್ಮೀರ ಕಣಿವೆಯಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ 298 ತುಕಡಿಗಳ ಅರೆಸೇನಾ ಪಡೆಯನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಶ್ರೀನಗರ, ಹಂದ್ವಾರಾ, ಗಾಂಧರ್ಬಲ್, ಬುಡ್‌ಗಾಮ್, ಕುಪ್ವಾರಾ, ಬಾರಾಮುಲ್ಲಾ, ಬಂಡಿಪೋರಾ, ಅನಂತನಾಗ್, ಶೋಪಿಯಾನ್, ಪುಲ್ವಾಮಾ, ಅವಂತಿಪೋರಾ ಮತ್ತು ಕುಲ್ಗಾಮ್‌ನಲ್ಲಿ ಈ ತುಕಡಿಗಳನ್ನು ನಿಯೋಜಿಸಲಾಗಿದೆ.
ಕಾಶ್ಮೀರ ಕಣಿವೆಯಲ್ಲಿ ಚುನಾವಣೆ ಸುಸೂತ್ರವಾಗಿ ನೆರವೇರಿಸುವ ಉದ್ದೇಶದಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಲ್ ಹಾಗೂ ಇಂಡೊ-ಟಿಬೆಟನ್ ಗಡಿ ಪೊಲೀಸ್ ಪಡೆ ಸೇರಿದಂತೆ ಒಟ್ಟು 298 ತುಕಡಿಗಳನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ ಶ್ರೀನಗರದಲ್ಲಿ 55, ಅನಂತನಾಗ್-50, ಕುಲ್ಗಾಮ್‌ನಲ್ಲಿ 31, ಬುಡ್‌ಗಾಮ್, ಪುಲ್ವಾಮಾ ಹಾಗೂ ಅವಂತಿಪೋರಾದಲ್ಲಿ ತಲಾ 24, ಶೋಪಿಯಾನ್- 22, ಕುಪ್ವಾರಾ- 20, ಬಾರಾಮುಲ್ಲಾ- 17, ಹಂದ್ವಾರಾ- 15, ಬಂಡಿಪೋರಾ- 13 ಹಾಗೂ ಗಾಂಧರ್ಬಲ್‌ನಲ್ಲಿ 3 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 90 ಕ್ಷೇತ್ರಗಳ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆಯ ಅಧಿಸೂಚನೆಯನ್ನು ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ. ಸೆ.18ರಂದು 24 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಸೆ. 25ರಂದು 2ನೇ ಹಂತ ಹಾಗೂ ಅ. 1ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ.
ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕಡೆಯ ದಿನ. ಪರಿಶೀಲನೆ ಆಗಸ್ಟ್ 28ರಂದು ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಆಗಸ್ಟ್ 30ರಂದು ಕೊನೆಯ ದಿನ.
ಮೊದಲ ಹಂತದಲ್ಲಿ ದಕ್ಷಿಣ ಕಾಶ್ಮೀರದ 16 ಕ್ಷೇತ್ರಗಳು ಮತ್ತು ಜಮ್ಮುವಿನ 8 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.