ತಿರುವನಂತಪುರಂ: ಒಲಿಂಪಿಕ್ ಪದಕ ವಿಜೇತ ಪಿ.ಆರ್.ಶ್ರೀಜೇಶ್ ಅವರಿಗೆ ಎರಡು ಕೋಟಿ ರೂಪಾಯಿ ಬಹುಮಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ಹಾಕಿಯಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಆಟಗಾರರಿಗೆ ಆಯಾ ರಾಜ್ಯಗಳ ಸರ್ಕಾರಗಳು ಪ್ರಶಸ್ತಿಗಳನ್ನು ಘೋಷಿಸಿದ್ದವು.
ಹಾಕಿಯಲ್ಲಿ ಸತತ ಎರಡನೇ ಬಾರಿಗೆ ಪದಕ ಗೆದ್ದಿರುವ ಪಿ.ಆರ್.ಶ್ರೀಜೇಶ್ ಅವರಿಗೆ ಕೇರಳದಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಅದ್ಧೂರಿ ಕಾರ್ಯಕ್ರಮ ಆಯೋಜಿಸುವ ಮೂಲಕ ಶ್ರೀಜೇಶ್ ಅವರನ್ನು ಸನ್ಮಾನಿಸಲು ಸರ್ಕಾರ ನಿರ್ಧರಿಸಿದೆ. ಹಾಕಿ ತಂಡದ ಇತರ ಸದಸ್ಯರೂ ಭಾಗಿಯಾಗುವ ಸೂಚನೆಗಳಿವೆ.
ಈ ಬಾರಿಯ ಒಲಿಂಪಿಕ್ಸ್‍ನಲ್ಲಿ ಸ್ಪೇನ್ ವಿರುದ್ಧ ಭಾರತೀಯ ಹಾಕಿ ಆಟಗಾರರು ಗೆಲುವು ಸಾಧಿಸಿದ್ದರು. ಶ್ರೀಜೇಶ್ ನಿವೃತ್ತಿ ಘೋಷಿಸಿದ್ದರಿಂದ ಇದು ಕೊನೆಯ ಪಂದ್ಯವಾಗಿತ್ತು. ಕಂಚಿನ ಪದಕದೊಂದಿಗೆ ನಿವೃತ್ತಿಯಾಗಿರುವುದು ತುಂಬಾ ಖುಷಿ ತಂದಿದೆ ಎಂದು ಶ್ರೀಜೇಶ್ ಪ್ರತಿಕ್ರಿಯಿಸಿದ್ದಾರೆ. ಟೂರ್ನಿಯುದ್ದಕ್ಕೂ ಶ್ರೀಜೇಶ್ ತೋರಿದ ಪ್ರದರ್ಶನ ತಂಡವನ್ನು ಮತ್ತೊಮ್ಮೆ ಪದಕದತ್ತ ಮುನ್ನಡೆಸಿತು.