HEALTH TIPS

ಭೂಕುಸಿತ: ಇನ್ನೂ 300 ಜನರು ನಾಪತ್ತೆ

            ವಯನಾಡ್‌ : ವಯನಾಡ್‌ನ ಮುಂಡಕ್ಕೈನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಲ್ಲಿ ಸುಮಾರು 300 ಜನರು ನಾಪತ್ತೆಯಾಗಿದ್ದಾರೆ. ಈ ಪ್ರದೇಶದಲ್ಲಿ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಕೇರಳದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಆರ್‌. ಅಜಿತ್‌ ಕುಮಾರ್‌ ಶುಕ್ರವಾರ ಹೇಳಿದ್ದಾರೆ.

           ಶೋಧ ಮತ್ತು ರಕ್ಷಣಾ ಕಾರ್ಯಚರಣೆಯ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, 'ನಮಗೆ ಈವರೆಗೆ ಬಂದಿರುವ ಮಾಹಿತಿಯ ಆಧಾರದ ಮೇಲೆ ಸುಮಾರು 300 ಜನರು ಕಣ್ಮರೆಯಾಗಿದ್ದಾರೆ. ಆದರೆ, ಕಂದಾಯ ಇಲಾಖೆ ಇನ್ನೂ ವಿವರಗಳನ್ನು ಸಂಗ್ರಹಿಸುತ್ತಿದೆ. ಒಂದು ಅಥವಾ ಎರಡು ದಿನಗಳಲ್ಲಿ ನಮಗೆ, ಕಣ್ಮರೆಯಾದವರ ಸಂಖ್ಯೆಯ ಬಗ್ಗೆ ಅಂತಿಮ ಚಿತ್ರಣ ಪಡೆಯಲು ಸಾಧ್ಯವಾಗಲಿದೆ' ಎಂದು ಹೇಳಿದರು.

              ಭೂಕುಸಿತ ಪೀಡಿತ ‍ಪ್ರದೇಶಗಳನ್ನು ಆರು ವಲಯಗಳಾಗಿ ವಿಂಗಡಿಸಲಾಗಿದೆ. ಶವಗಳನ್ನು ಪತ್ತೆಹಚ್ಚಲು ಶ್ವಾನಗಳೊಂದಿಗೆ ಪ್ರತ್ಯೇಕ ತಂಡಗಳು ಶೋಧ ಕಾರ್ಯ ಆರಂಭಿಸಿವೆ. ಪೋತುಕಲ್‌ನಲ್ಲಿ ಶವಗಳನ್ನು ಪತ್ತೆ ಮಾಡಿದ್ದೇವೆ. ಹಾಗಾಗಿ, ವಿಶೇಷ ಏಜೆನ್ಸಿಗಳ ನೆರವಿನಲ್ಲಿ ನಾವು ಕೋಯಿಕ್ಕೋಡ್‌ ನಗರದವರೆಗೆ ಚಾಲಿಯಾರ್‌ ನದಿಯಲ್ಲಿ ಕೂಂಬಿಂಗ್‌ ನಡೆಸಲಿದ್ದೇವೆ. ಚಾಲಿಯಾರ್‌ ನದಿ ದಡದ ವ್ಯಾಪ್ತಿಯ ಎಲ್ಲ ಪೊಲೀಸ್‌ ಠಾಣೆಗಳಿಗೂ ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಶೋಧ ನಡೆಸಲು ಸೂಚಿಸಲಾಗಿದೆ' ಎಂದು ಅವರು ತಿಳಿಸಿದರು.

ಸಂತ್ರಸ್ತರ ನೆರವಿಗೆ 121 ಸದಸ್ಯರ ಮಾನಸಿಕ ಆರೋಗ್ಯ ತಂಡ

                ತಿರುವನಂತಪುರ (PTI): ವಯನಾಡ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಲ್ಲಿ ಬದುಕುಳಿದ ಸಂತ್ರಸ್ತರಿಗೆ ಮಾನಸಿಕ ನೆರವು ನೀಡಲು ಮಾನಸಿಕ ಆರೋಗ್ಯ ವಿಪತ್ತು ನಿರ್ವಹಣಾ ತಂಡವನ್ನು ರಚಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಶುಕ್ರವಾರ ತಿಳಿಸಿದ್ದಾರೆ.

ಕೇರಳದ ಗುಡ್ಡಗಾಡು ಜಿಲ್ಲೆಯಲ್ಲಿ ದುರಂತ ಸಂಭವಿಸಿದ ಕೂಡಲೇ ಮನೋವೈದ್ಯರು, ಕ್ಲಿನಿಕಲ್ ಸೈಕಾಲಜಿಸ್ಟ್‌ಗಳು, ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರು ಮತ್ತು ಆಪ್ತಸಮಾಲೋಚಕರನ್ನು ಒಳಗೊಂಡ ​​121 ಸದಸ್ಯರ ತಂಡವನ್ನು ಮಂಗಳವಾರ ರಚಿಸಲಾಗಿದೆ ಎಂದು ವೀಣಾ ಹೇಳಿದರು.

           ಮಾನಸಿಕ ಆರೋಗ್ಯ ಕಾರ್ಯಕರ್ತರು, ದುರಂತದಲ್ಲಿ ಬದುಕುಳಿದವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಸಾಂತ್ವನ ನೀಡಲಿದ್ದಾರೆ. ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ಆದ್ಯತೆ ನೀಡಲಾಗುವುದು. ಈಗಾಗಲೇ ಎಲ್ಲ ಆಸ್ಪತ್ರೆಗಳು ಮತ್ತು ಪರಿಹಾರ ಶಿಬಿರಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

              ವಿಪತ್ತಿನಿಂದ ಉಂಟಾಗುವ ಖಿನ್ನತೆ ಮತ್ತು ಆತಂಕಕ್ಕೆ ದೀರ್ಘಾವಧಿಯ ಕಾಳಜಿ ಬೇಕಾಗಬಹುದು. ತಂಡವು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ದೊರೆಯುವಂತೆ ಮಾಡಲಿದೆ. ಈ ತಂಡವು ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸೇರಿದಂತೆ ರಕ್ಷಣಾ ಕಾರ್ಯಕರ್ತರು, ಕಂದಾಯ ಅಧಿಕಾರಿಗಳು, ಸ್ಥಳೀಯ ಸ್ವಯಂ ಆಡಳಿತದ ಇಲಾಖೆ ಅಧಿಕಾರಿಗಳು ಮತ್ತು ದುರಂತದ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರಿಗೂ ಸಮಾಲೋಚನೆ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಟೋಲ್ ಫ್ರೀ ಸಂಖ್ಯೆ 14416 ಮೂಲಕ 24 ತಾಸುಗಳು ಮಾನಸಿಕ ಆರೋಗ್ಯ ನೆರವು ಲಭ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮುನ್ನೆಚ್ಚರಿಕೆ ವ್ಯವಸ್ಥೆ ‍ಪ್ರಾಯೋಗಿಕ: ಜಿಎಸ್‌ಐ

                  ಕೋಲ್ಕತ್ತ: ಕೇರಳದ ಭೂಕುಸಿತ ಪೀಡಿತ ವಯನಾಡ್‌ನಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯು ವಿಫಲಗೊಂಡಿದೆ ಎನ್ನುವ ವರದಿಗಳ ನಡುವೆಯೇ, 'ಜಿಲ್ಲೆಗೆ ಪ್ರಾದೇಶಿಕ ಮುನ್ಸೂಚನೆ ನೀಡುವ ವ್ಯವಸ್ಥೆ ಪ್ರಾಯೋಗಿಕ ಹಂತದಲ್ಲಿದೆ. ಪರೀಕ್ಷೆಯ ಭಾಗವಾಗಿ ದಿನಕ್ಕೊಮ್ಮೆ ಮುನ್ಸೂಚನೆ ನೀಡಲಾಗಿತ್ತು' ಎಂದು ಶುಕ್ರವಾರ ಅದು ಸ್ಪಷ್ಟನೆ ನೀಡಿದೆ.

          ಈ ಪ್ರಕ್ರಿಯೆಯು 'ಮುನ್ಸೂಚನೆ ಮಾದರಿಯನ್ನು ನಿರ್ಮಿಸುವ ಒಂದು ಭಾಗವಾಗಿದೆ. ಇದು ಸಾರ್ವಜನಿಕ ಬಳಕೆಗೆ ಸಿದ್ಧವಾಗಲು ಇನ್ನೂ ನಾಲ್ಕೈದು ವರ್ಷಗಳು ಬೇಕಾಲಿದೆ ಎಂದು ಜಿಎಸ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

            ಪ್ರಾಯೋಗಿಕ ಮುನ್ಸೂಚನೆಯ ವ್ಯವಸ್ಥೆಯು ಜುಲೈ 28ರಂದು ಹೊರತುಪಡಿಸಿ ಜುಲೈ 26ರಿಂದ 30ರ ನಡುವೆ ಎಲ್ಲ ದಿನಗಳಲ್ಲಿಯೂ ಜಿಎಸ್‌ಐ ಎಚ್ಚರಿಕೆ ಸಂದೇಶಗಳನ್ನು ನೀಡಿದೆ ಎಂದು ಅಧಿಕಾರಿ
ಹೇಳಿದರು.

13 ಜಿಲ್ಲೆಗಳಲ್ಲಿ ಜಿಎಸ್‌ಐ ಚಟುವಟಿಕೆ:

             ಈ ನಡುವೆ, ಕೋಲ್ಕತ್ತದಲ್ಲಿ ಪ್ರಧಾನ ಕಚೇರಿ ಹೊಂದಿರುವ ಜಿಎಸ್‌ಐ ಇತ್ತೀಚೆಗೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ಕಾಲಿಮ್‌ಪೊಂಗ್‌ ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನ ನೀಲಗಿರಿಯಲ್ಲಿ ಸಾರ್ವಜನಿಕ ಬಳಕೆಗಾಗಿ ಜುಲೈ 19ರಿಂದಲೇ ಭೂಕುಸಿತ ಮುನ್ಸೂಚನೆಯ ವ್ಯವಸ್ಥೆಯನ್ನು ಕಾರ್ಯಗತಗೊಳಿಸಿದೆ. ಇದನ್ನು ಸಾರ್ವಜನಿಕ ಬಳಕೆಗೆ ನೀಡುವ ಮೊದಲು 2020ರಿಂದ ಪ್ರಾಯೋಗಿಕ ಕ್ರಮವಾಗಿ ತಳಮಟ್ಟದ ಪರೀಕ್ಷೆ ನಡೆಸಿತ್ತು.

            ಈಗ 13 ಜಿಲ್ಲೆಗಳಲ್ಲಿ ಜಿಎಸ್‌ಐ ಭೂ ಪರೀಕ್ಷೆಯ ಚಟುವಟಿಕೆಗಳು ಪ್ರಗತಿಯಲ್ಲಿವೆ. ಭೂಕುಸಿತ ಪೀಡಿತ ಎಲ್ಲ ಜಿಲ್ಲೆಗಳಿಗೂ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು 2030ರೊಳಗೆ ಸಾಧಿಸುವ ಗುರಿಯನ್ನು ಜಿಎಸ್‌ಐ ಹೊಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries