ನವದೆಹಲಿ :ದೇಶಾದ್ಯಂತ ಕಳೆದ ಎರಡು ತಿಂಗಳಲ್ಲಿ ಉತ್ತಮವಾಗಿ ಮುಂಗಾರು ಮಳೆಯಾಗಿದ್ದು, ಕಳೆದ 30 ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಇತಿಹಾಸದಲ್ಲೇ ಎರಡನೇ ಗರಿಷ್ಠ ಪ್ರಮಾಣದ ಮಳೆಯಾಗಿದೆ. ಮುಂಗಾರು ಬಿತ್ತನೆ ಹಾಗೂ ಮಣ್ಣಿನ ತೇವಾಂಶಕ್ಕೆ ಇದು ಪೂರಕವಾಗಿದ್ದು, ರೈತಾಪಿ ವರ್ಗಕ್ಕೆ ಖುಷಿ ತಂದಿದೆ.
ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ಸರಾಸರಿ 585 ಮಿಲಿಮೀಟರ್ ಮಳೆ ಬಿದ್ದಿದ್ದು, ಮುಂದಿನ ಎರಡು ದಿನಗಳಲ್ಲಿ ಇದು 595 ಮಿಲಿಮೀಟರ್ ತಲುಪುವ ನಿರೀಕ್ಷೆ ಇದೆ. ಇದು ಈ ಅವಧಿಯ ಧೀರ್ಘಾವಧಿ ಸರಾಸರಿ (535.4 ಮಿ.ಮೀ)ಗೆ ಹೋಲಿಸಿದರೆ ಶೇಕಡ 11ರಷ್ಟು ಅಧಿಕ. ಕಳೆದ 30 ವರ್ಷಗಳ ಅವಧಿಯಲ್ಲಿ 2019ರ ಜುಲೈ-ಆಗಸ್ಟ್ ತಿಂಗಳಲ್ಲಿ 596.1 ಮಿಲಿಮೀಟರ್ ಮಳೆಯಾಗಿರುವುದು ಇದುವರೆಗಿನ ಗರಿಷ್ಠ ಎನಿಸಿಕೊಂಡಿದೆ.
ಆಗಸ್ಟ್ ನಲ್ಲಿ ದೇಶಾದ್ಯಂತ ನಿರೀಕ್ಷೆಗಿಂತ ಉತ್ತಮ ಮಳೆಯಾಗಿದ್ದು, ಜುಲೈ ತಿಂಗಳಲ್ಲಿ ಕೂಡಾ ಶೇಕಡ 9ರಷ್ಟು ಅಧಿಕ ಮಳೆಯಾಗಿತ್ತು. ಆಗಸ್ಟ್ 29ರ ವರೆಗಿನ ಅಂಕಿ ಅಂಶಗಳ ಪ್ರಕಾರ, ದೇಶಾದ್ಯಂತ ವಾಡಿಕೆ ಮಳೆಗಿಂತ ಶೇಕಡ 16ರಷ್ಟು ಅಧಿಕ ಮಳೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಧೀರ್ಘಾವಧಿ ಸರಾಸರಿಯ ಶೇಕಡ 94 ರಿಂದ 106ರಷ್ಟು ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು.
ಆಗಸ್ಟ್ ತಿಂಗಳ ಮಳೆ ಎಲ್ಲ ನಿರೀಕ್ಷೆಗಳನ್ನೂ ಮೀರಿದೆ. ಆದರೆ ಹವಾಮಾನ ಮಾದರಿಗಳು ಮುಂದಿನ 10-14 ದಿನಗಳ ಕಾಲ ಮಳೆ ದುರ್ಬಲವಾಗುವ ಸಾಧ್ಯತೆಗಳನ್ನು ಅಂದಾಜಿಸಿವೆ. ಕೇಂದ್ರ ಭಾರತದಲ್ಲಿ ಎರಡು ವಾರಗಳಿಂದ ವ್ಯಾಪಕ ಮಳೆಯಗುತ್ತಿದ್ದು, ಉತ್ತರ ಹಾಗೂ ದಕ್ಷಿಣ ಭಾರತದಲ್ಲೂ ಈ ಅವಧಿಯಲ್ಲಿ ಒಳ್ಳೆಯ ಮಳೆ ಬಿದ್ದಿದೆ ಎಂದು ಹಿರಿಯ ಹವಾಮಾನ ತಜ್ಞ ಹಾಗೂ ಭೂವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಂ.ರಾಜೀವನ್ ವಿವರಿಸಿದ್ದಾರೆ.