ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭಾರಿ ಭೂಕುಸಿತದಿಂದಾಗಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ಗುರುತು ಪತ್ತೆಯಾಗದ 31 ಮೃತದೇಹಗಳು ಹಾಗೂ 158 ದೇಹದ ಭಾಗಗಳಿಗೆ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಕೆ.ರಾಜನ್ ಸೋಮವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಸಮಾಧಿಗೆ ನಿಗದಿತ ಸಂಖ್ಯೆಯನ್ನು ಗುರುತಿಸಲಾಗಿದ್ದು, ಅಲ್ಲಿಯೇ ಮೃತದೇಹಗಳನ್ನು ಹೂಳಲಾಗುವುದು. ಡಿಎನ್‌ಎ ಪರೀಕ್ಷೆಯ ವರದಿಯ ಪ್ರಕಾರ ದೇಹದ ಭಾಗಗಳನ್ನು ವಿಂಗಡಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಹೇಳಿದ್ದಾರೆ.
'ಮೊದಲು ಗುರುತು ಪತ್ತೆಯಾಗದ 31 ಮೃತದೇಹಗಳಿಗೆ ಅಂತ್ಯ ಸಂಸ್ಕಾರ ಮಾಡಲಾಗುವುದು. ನಂತರ ಪತ್ತೆಯಾಗಿರುವ ದೇಹದ ಭಾಗಗಳನ್ನು ನಿಗದಿತ ಸಮಾಧಿಯಲ್ಲಿ ಹೂಳಲಾಗುವುದು.ಈಗಾಗಲೇ ಹ್ಯಾರಿಸನ್ಸ್ ಮಲಯಾಳಂ ಲಿಮಿಟೆಡ್ ಒಡೆತನದ ಭೂಮಿಯಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ಎಲ್ಲಾ ಧರ್ಮಗಳ ಪ್ರಾರ್ಥನೆ ಮತ್ತು ವಿಧಿ ವಿಧಾನದ ಮೂಲಕ ಅಂತ್ಯ ಸಂಸ್ಕಾರ ನಡೆಯಲಿದೆ. ಸಂಪುಟ ಉಪ ಸಮಿತಿ ಸಭೆಯ ಬಳಿಕ ಪ್ರಕ್ರಿಯೆ ಆರಂಭವಾಗಲಿದೆ' ಎಂದು ರಾಜನ್ ತಿಳಿಸಿದ್ದಾರೆ.
ಚಾಲಿಯಾರ್ ನದಿ ಮತ್ತು ಸುತ್ತಮತ್ತಲಿನ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು. 15 ವಿದೇಶಿ ಶ್ವಾನಗಳನ್ನು ಶೋಧ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ರಾಜನ್ ಮಾಹಿತಿ ನೀಡಿದ್ದಾರೆ