ಮುಳ್ಳೇರಿಯ: ಎಂಭತ್ತರ ಸಂಭ್ರಮದಲ್ಲಿರುವ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಸಂಸ್ಥಾಪಕಧ್ಯಕ್ಷರು, ಯಕ್ಷಗಾನ ಗುರುಕುಲದ ರೂವಾರಿ ಕವಿ, ಅರ್ಥಧಾರಿ, ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸಂಸ್ಮರಣೆಯೊಂದಿಗೆ ನೀಡಲಾಗುತ್ತಿರುವ 2024 ರ ಸಾಲಿನ ಪ್ರತಿಷ್ಠಿತ ಕೀರಿಕ್ಕಾಡು ಪ್ರಶಸ್ತಿಗೆ ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟರ ಹೆಸರನ್ನು ಘೋಷಿಸಲಾಗಿದೆ.
ವಿದ್ವಾನ್ ಉಮಾಕಾಂತ ಭಟ್ಟರು ಖ್ಯಾತ ಯಕ್ಷಗಾನ ಅರ್ಥಧಾರಿಯಾಗಿ, ಪ್ರವಚನಕಾರರಾಗಿ, ಉಪನ್ಯಾಸಕರಾಗಿ, ಕವಿಯಾಗಿ ನಾಡಿನ ಉದ್ದಗಲಗಳಲ್ಲೂ ಪ್ರಸಿದ್ಧರಾದವರು. ನ್ಯಾಯಶಾಸ್ತ್ರ ಪಂಡಿತರಾಗಿ, ಪ್ರಾಚಾರ್ಯರಾಗಿ ಮೇಲುಕೋಟೆಯ ಸಂಸ್ಕøತ ಮಹಾವಿದ್ಯಾಲಯದಲ್ಲಿ ಸುದೀರ್ಘ ಕಾಲ ಸೇವೆಯನ್ನು ಸಲ್ಲಿಸಿದ ಉಮಾಕಾಂತ ಭಟ್ಟರು ಬಹುಮಾನ್ಯರು ಮತ್ತು ಬಹುಶ್ರುತ ವಿದ್ವಾಂಸರು.
ಆಗಸ್ಟ್ 31ರಂದು ದಿನಪೂರ್ತಿ ನಡೆಯಲಿರುವ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಎಂಭತ್ತರ ಸಂಭ್ರಮದ ಕಲೋತ್ಸವದಲ್ಲಿ ಪ್ರೊ.. ಶ್ರೀಪತಿ ಕಲ್ಲೂರಾಯ ಅವರ ಅಧ್ಯಕ್ಷತೆಯಲ್ಲಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಗೌರವ ಉಪಸ್ಥಿತಿಯೊಂದಿಗೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಕೀರಿಕ್ಕಾಡು ಪ್ರಶಸ್ತಿಯನ್ನು ವಿದ್ವಾನ್ ಉಮಾಕಾಂತ ಭಟ್ಟರಿಗೆ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.