ಅಗರ್ತಲಾ: ಬಾಂಗ್ಲಾದೇಶದಲ್ಲಿ 37 ವರ್ಷಗಳ ಕಾಲ ಸೆರೆವಾಸದಲ್ಲಿದ್ದ ತ್ರಿಪುರಾದ ವ್ಯಕ್ತಿ ಕೊನೆಗೂ ಸ್ವದೇಶಕ್ಕೆ ಮರಳಿದ್ದಾರೆ.
ತ್ರಿಪುರಾದ ಸಿಪಾಹಿಜಲ ಜಿಲ್ಲೆಯ ಶಹಜಹಾನ್, ಬಾಂಗ್ಲಾದೇಶದಲ್ಲಿ 37 ವರ್ಷಗಳ ಕಾಲ ಜೈಲಿನಲ್ಲಿದ್ದರು. ಗಡಿಯಲ್ಲಿ ಬಿಎಸ್‌ಎಫ್ ನೆರವಿನೊಂದಿಗೆ ಶ್ರೀಮಂತಪುರ ಭೂ ಕಸ್ಟಮ್ಸ್ ಮೂಲಕ ಶಹಜಹಾನ್ ತವರಿಗೆ ಮರಳಿದರು.
ಸೋನಮುರ ಸಬ್‌ಡಿವಿಷನ್‌ನ ಗಡಿ ಗ್ರಾಮವಾದ ರವೀಂದ್ರನಗರದ ನಿವಾಸಿ ಶಹಜಹಾನ್, 1988ರಲ್ಲಿ ಬಾಂಗ್ಲಾದೇಶದ ಕೊಮಿಲ್ಲಾದ ಅತ್ತೆಯ ಮನೆಗೆ ತೆರಳಿದ್ದರು. ಈ ವೇಳೆ ದಾಳಿ ನಡೆಸಿದ್ದ ಬಾಂಗ್ಲಾದೇಶದ ಪೊಲೀಸರು, ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಶಹಜಹಾನ್ ಅವರನ್ನು ಬಂಧಿಸಿದ್ದರು.
'ಕೊಮಿಲ್ಲಾ ನ್ಯಾಯಾಲಯ ನನಗೆ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆಗ ನನಗೆ 25 ವರ್ಷ ವಯಸ್ಸಾಗಿತ್ತು. ಶಿಕ್ಷೆಯನ್ನು ಪೂರ್ಣಗೊಳಿಸಿದರೂ ಜೈಲಿನಿಂದ ಮುಕ್ತಿ ಸಿಗಲಿಲ್ಲ. ಮತ್ತೆ 26 ವರ್ಷ ಸೆರೆವಾಸ ಅನುಭವಿಸಬೇಕಾಯಿತು. ಈಗ 37 ವರ್ಷಗಳ ಬಳಿಕ ಬಂಧನದಿಂದ ಮುಕ್ತಿ ಪಡೆದಿದ್ದೇನೆ' ಎಂದು ಶಹಜಹಾನ್ ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆಯಷ್ಟೇ ಶಹಜಹಾನ್‌ಗೆ ಎದುರಾಗಿರುವ ಅನ್ಯಾಯದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ವಿದೇಶಗಳಲ್ಲಿ ಸಿಕ್ಕಿಬಿದ್ದ ವಲಸಿಗರಿಗೆ ನೆರವಾಗುವ 'ಝರಾ ಸಂಸ್ಥೆ'ಯು ಶಹಜಹಾನ್ ಅವರನ್ನು ಬಿಡುಗಡೆ ಮಾಡಲು ಸಹಾಯ ಮಾಡಿತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
62 ವರ್ಷದ ಶಹಜಹಾನ್ ಮನೆ ತೊರೆದಾಗ ಅವರ ಪತ್ನಿ ಗರ್ಭಿಣಿಯಾಗಿದ್ದರು. ಈಗ ಮಗನನ್ನು ಮೊದಲ ಬಾರಿ ನೋಡುವ ಮೂಲಕ ಭಾವುಕರಾಗಿದ್ದಾರೆ.
'ನನಗೀಗ ಪುನರ್ಜನ್ಮ ದೊರಕಿದೆ. ನನ್ನ ಸಂತೋಷವನ್ನು ವಿವರಿಸಲು ಅಸಾಧ್ಯ. ಹುಟ್ಟೂರಿಗೆ ಮತ್ತೆ ಬರಲು ಸಾಧ್ಯವಾಗಲಿದೆ ಎಂದು ಅಂದುಕೊಂಡಿರಲಿಲ್ಲ. ಝರಾ ಸಂಸ್ಥೆಯು ನನಗೆ ನೆರವು ಮಾಡಿದ್ದು, ಎಂದಿಗೂ ಋಣಿಯಾಗಿರುತ್ತೇನೆ' ಎಂದು ತಿಳಿಸಿದ್ದಾರೆ.