ನವದೆಹಲಿ: ಚಂದ್ರನ ಮೇಲ್ಮೈ ಕುದಿಯುವ ಶಿಲಾ ಬಂಡೆಗಳಿಂದ ಆವರಿಸಿದೆ ಎನ್ನುವ ದೀರ್ಘಕಾಲದ ಸಿದ್ಧಾಂತಕ್ಕೆ ತಾಜಾ ಪುರಾವೆಗಳನ್ನು ಚಂದ್ರಯಾನ-3ರ ಮೊದಲ ವೈಜ್ಞಾನಿಕ ಫಲಿತಾಂಶಗಳು ಒದಗಿಸಿವೆ.
ಕಳೆದ ವರ್ಷದ ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ -3 ನಡೆಸಿದ ಸುದೀರ್ಘ ಕಾರ್ಯಾಚರಣೆಯ ವೇಳೆ ಪ್ರಗ್ಯಾನ್ ರೋವರ್‌ನಲ್ಲಿರುವ ಉಪಕರಣದಿಂದ ನಡೆಸಲಾದ ಚಂದ್ರನ ಮಣ್ಣಿನ 23 ಸೆಟ್ ರಾಸಾಯನಿಕ ವಿಶ್ಲೇಷಣೆಯ ಫಲಿತಾಂಶಗಳು ಈ ಪುರಾವೆ ಒದಗಿಸಿವೆ ಎಂದು 'ನೇಚರ್' ಪತ್ರಿಕೆಯಲ್ಲಿ ಬುಧವಾರ ಪ್ರಕಟವಾದ ಅಧ್ಯಯನ ವರದಿ ಹೇಳಿದೆ.
'ನಾವು ಕಳುಹಿಸಿದ್ದ ಉಪಕರಣವು ಚಂದ್ರನ ಮೇಲ್ಮೈಯ ಧಾತುರೂಪದ ಸಂಯೋಜನೆಯನ್ನು ವಿಶ್ಲೇಷಿಸಿದೆ. ಚಂದ್ರನ ದಕ್ಷಿಣ ಧ್ರುವದ ಬಳಿಯ ಸಂಯೋಜನೆಯು ಏಕರೂಪವಾಗಿದೆ ಮತ್ತು ಎತ್ತರದ ಪ್ರದೇಶಗಳಿಗೆ ಹೋಲುತ್ತದೆ. ಇದು ಎಲ್‌ಎಂಒ (ಚಂದ್ರ ಶಿಲಾಪಾಕ ಸಾಗರ) ಸಿದ್ಧಾಂತವನ್ನು ದೃಢೀಕರಿಸುತ್ತದೆ' ಎಂದು ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯದ ಭೂವಿಜ್ಞಾನಿ, ಈ ಅಧ್ಯಯನ ವರದಿಯ ಲೇಖಕರಲ್ಲಿ ಒಬ್ಬರಾದ ಸಂತೋಷ್ ವಿ. ವಡವಾಳೆ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಭಾರತೀಯ ವಿಜ್ಞಾನಿಗಳ ಈ ಅಧ್ಯಯನ ವರದಿಯು ಚಂದ್ರಯಾನ -3 ರ ಲ್ಯಾಂಡಿಂಗ್‌ನ ಮೊದಲ ವಾರ್ಷಿಕೋತ್ಸವದ ಒಂದು ದಿನ ಮುಂಚಿತವಾಗಿ ಪ್ರಕಟವಾಗಿದೆ. ಚಂದ್ರಯಾನ -3 ಯಶಸ್ವಿಯಾದ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲಾಗುತ್ತದೆ.
'ಇಸ್ರೊ ಚಂದ್ರಯಾನ 4 ಮತ್ತು 2 ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಚಂದ್ರಯಾನ -4 ಯೋಜನೆಯು 2027ಕ್ಕೆ ಉಡಾವಣೆ ಮಾಡಲು ನಿಗದಿಪಡಿಸಲಾಗಿದೆ. ಚಂದ್ರಯಾನ-5 ಯೋಜನೆಯು ಜಪಾನ್‌ನ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿಯೊಂದಿಗೆ ಕೈಗೊಂಡಿರುವ ಜಂಟಿ ಯೋಜನೆಯಾಗಿದೆ' ಎಂದು ಇಸ್ರೊ ಅಧಿಕಾರಿಗಳು ಹೇಳಿದ್ದಾರೆ.