ನವದೆಹಲಿ: ದೇಶದಲ್ಲಿ ಜನಗಣತಿ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಹಾಗೂ ಘೋಷಣೆ ಮಾಡಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ನವದೆಹಲಿ: ದೇಶದಲ್ಲಿ ಜನಗಣತಿ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಹಾಗೂ ಘೋಷಣೆ ಮಾಡಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಜಾತಿಗಣತಿ ಕುರಿತ ಇಂತಹ ಸ್ಪಷ್ಟನೆಗಳು ಕಳೆದ ಮೂರು ವರ್ಷಗಳಿಂದ ವಿಳಂಬವಾಗಿದೆ ಎಂದು ದೂರಿದೆ.
ಸೂಕ್ತ ಸಮಯದಲ್ಲಿ ಜನಗಣತಿ ಕಾರ್ಯ ನಡೆಸಲಾಗುವುದು. ಅದು ನಿರ್ಧಾರವಾದಾಗ ನಾವು ಅದನ್ನು ಘೋಷಿಸುತ್ತೇವೆ ಎಂದು ರಾಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಶಾ ಉತ್ತರಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಸ್ವಯಂಘೋಷಿತ ಚಾಣಕ್ಯ ಈಗಷ್ಟೇ ಬಾಂಬ್ ಸಿಡಿಸಿದ್ದಾರೆ. ನಿನ್ನೆ (ಶನಿವಾರ) ಛತ್ತೀಸ್‌ಗಢದಲ್ಲಿ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಸೂಕ್ತ ಸಮಯದಲ್ಲಿ ಜನಗಣತಿ ನಡೆಸಲಾಗುವುದು. ಅದು ನಿರ್ಧಾರವಾದಾಗ ಜನಗಣತಿ ಘೋಷಣೆ ಮಾಡಲಾಗುವುದು ಎಂದು ಶಾ ಹೇಳಿದ್ದಾರೆ. ಈಗಾಗಲೇ ಜಾತಿಗಣತಿ ಕುರಿತ ಇಂತಹ ಸ್ಪಷ್ಟನೆಗಳು ಮೂರು ವರ್ಷಗಳಿಂದ ವಿಳಂಬವಾಗಿವೆ' ಎಂದು ತಿಳಿಸಿದ್ದಾರೆ.
ಕೋವಿಡ್-19 ಪಿಡುಗಿನ ಕಾರಣ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಮುಂದೂಡಲಾಗಿತ್ತು. ಜನಗಣತಿ ಕಾರ್ಯ ಸ್ಥಗಿತಗೊಂಡಿದ್ದು, ಸರ್ಕಾರ ಇನ್ನೂ ಹೊಸ ವೇಳಾಪಟ್ಟಿ ಪ್ರಕಟಿಸಿಲ್ಲ. ಹಲವು ವಿರೋಧ ಪಕ್ಷಗಳು ಜನಗಣತಿಗೆ ಒತ್ತಾಯಿಸುತ್ತಿವೆ. ಆದರೆ, ಈ ವಿಚಾರವಾಗಿ ಸರ್ಕಾರದಿಂದ ಇದುವರೆಗೆ ಯಾವುದೇ ಘೋಷಣೆಯಾಗಿಲ್ಲ.