ಕೋಲ್ಕತ್ತ: ಕೋಲ್ಕತ್ತದಿಂದ ತಾಯ್ನಾಡಿಗೆ ತೆರಳುತ್ತಿದ್ದ 45 ಬಾಂಗ್ಲಾದೇಶಿ ಪ್ರಜೆಗಳು ಮಂಗಳವಾರ ಪ್ರಯಾಣ ಮೊಟಕುಗೊಳಿಸಿ, ಭಾರತ ಗಡಿಯ ಪೆತ್ರಾಪೋಲ್ ತಾಣದಲ್ಲಿಯೇ ಉಳಿಯಬೇಕಾಯಿತು.
ಕೋಲ್ಕತ್ತ: ಕೋಲ್ಕತ್ತದಿಂದ ತಾಯ್ನಾಡಿಗೆ ತೆರಳುತ್ತಿದ್ದ 45 ಬಾಂಗ್ಲಾದೇಶಿ ಪ್ರಜೆಗಳು ಮಂಗಳವಾರ ಪ್ರಯಾಣ ಮೊಟಕುಗೊಳಿಸಿ, ಭಾರತ ಗಡಿಯ ಪೆತ್ರಾಪೋಲ್ ತಾಣದಲ್ಲಿಯೇ ಉಳಿಯಬೇಕಾಯಿತು.
ಬಾಂಗ್ಲಾದೇಶದಲ್ಲಿ ಉಂಟಾಗಿರುವ ಅರಾಜಕತೆ ಹಿನ್ನೆಲೆಯಲ್ಲಿ ಭಾರತ ಮತ್ತು ಬಾಂಗ್ಲಾ ನಡುವಣ ಬಸ್ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಲಾಗಿರುವುದೇ ಇದಕ್ಕೆ ಕಾರಣ.
ಬಸ್‌ನಲ್ಲಿದ್ದ ಎಲ್ಲರೂ ಬಾಂಗ್ಲಾ ಪ್ರಯಾಣಿಕರು. ಕೋಲ್ಕತ್ತಕ್ಕೆ ಬಹುತೇಕರು ವೈದ್ಯಕೀಯ ಚಿಕಿತ್ಸೆಗೆ ಬಂದಿದ್ದರು.
ಕರ್ಫ್ಯೂ ಮತ್ತು ಅನಿಶ್ಚಿತ ಸ್ಥಿತಿಯ ನಡುವೆಯೂ ಸಾಧ್ಯವಾದಷ್ಟೂ ಬಸ್ ಸಂಚಾರ ಸೇವೆ ಕಾಯ್ದುಕೊಳ್ಳಲು ಒತ್ತುನೀಡಲಾಗಿದೆ. ನಾಳೆಯೊಳಗೆ ಬಸ್ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಬರಬಹುದು ಎಂದು ಬಸ್ ಮಾಲೀಕರೊಬ್ಬರು ತಿಳಿಸಿದರು.
'ಮುಂದಿನ ಸೂಚನೆವರೆಗೆ ಸಂಚಾರ ಸೇವೆ ನಿರ್ಬಂಧಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ' ಎಂದು ಬಸ್ ಮಾಲೀಕರಾದ ಶ್ಯಾಮಲಿ ಪರಿಬಹನ್ ಸಂಸ್ಥೆಯ ಮಾಲೀಕ ಅಬನಿ ಘೋಷ್ ತಿಳಿಸಿದರು.
ಪಶ್ಚಿಮ ಬಂಗಾಳ ಸಾರಿಗೆ ನಿಗಮದ ಸಹಯೋಗದಲ್ಲಿ ಸಂಸ್ಥೆಯೊಂದು ಬಾಂಗ್ಲಾಗೆ ಬಸ್ ಸಂಚಾರ ಸೇವೆ ಕಲ್ಪಿಸುತ್ತಿದೆ. ಈ ಸಂಸ್ಥೆಯ 'ಸೌಹಾರ್ದ್ಯ'ಹೆಸರಿನ ಬಸ್ ಸೇವೆಯು ಉಭಯ ರಾಷ್ಟ್ರಗಳ ಪ್ರಯಾಣಿಕರಲ್ಲಿ ಹೆಸರಾಗಿದೆ.
ಬಾಂಗ್ಲಾದೇಶದ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು, ಬಸ್ ಸೇವೆ ಪುನರಾರಂಭ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.