ನವದೆಹಲಿ: 45 ಕೋಟಿ ರೂ. ತೆರಿಗೆ ವಂಚನೆ ಪ್ರಕರಣದಲ್ಲಿ ಭಾರತೀಯ ವೈದ್ಯಕೀಯ ಸಂಘಕ್ಕೆ (ಐಎಂಎ) ಕೇಂದ್ರ ಜಿಎಸ್ ಟಿ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಐಎಂಎಯ ಕೇರಳ ಘಟಕವು ಆಯವ್ಯಯ ಪತ್ರವನ್ನು ನೆಪವಾಗಿಟ್ಟು ತೆರಿಗೆ ವಂಚಿಸಿರುವುದು ಪತ್ತೆಯಾಗಿದೆ. ದಾಳಿಯಲ್ಲಿ ವಂಚನೆಯ ಆಯವ್ಯಯ ಪತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಚಾರಿಟಬಲ್ ಆಕ್ಟ್ ಅಡಿಯಲ್ಲಿ ನೋಂದಾಯಿತ ಸಂಸ್ಥೆಯಾಗಿರುವುದರಿಂದ ತೆರಿಗೆ ವಿನಾಯಿತಿಗೆ ಅರ್ಹತೆ ಇದೆ ಎಂಬುದು ಐಎಂಎ ವಾದವಾಗಿತ್ತು. ಆದರೆ ಇತರ ಹಲವು ವ್ಯವಹಾರಗಳ ಮೂಲಕ ಭಾರಿ ಲಾಭ ಗಳಿಸುತ್ತಿರುವುದನ್ನು ಜಿಎಸ್ ಟಿ ಇಲಾಖೆ ಪತ್ತೆ ಮಾಡಿದೆ. ಐಎಂಎಯ ಚಟುವಟಿಕೆಗಳು ಚಾರಿಟಬಲ್ ಸೊಸೈಟಿ ಅಥವಾ ಕ್ಲಬ್‍ನ ಚಟುವಟಿಕೆಗಳನ್ನು ಮೀರಿವೆ ಎಂದು ಕೇಂದ್ರ ಜಿಎಸ್‍ಟಿ ಇಲಾಖೆ ಹೈಕೋರ್ಟ್‍ನಲ್ಲಿ ಸ್ಪಷ್ಟಪಡಿಸಿದೆ.
ಆಸ್ತಿಗೆ ಸಂಬಂಧಿಸಿದಂತೆ ಮಾಹಿತಿ ವರ್ಗಾವಣೆ ಕೋರಿ ಜಿಎಸ್‍ಟಿ ಇಲಾಖೆ ನೀಡಿದ್ದ ನೋಟಿಸ್ ಪ್ರಶ್ನಿಸಿ ಐಎಂಎ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ ನಂತರ ಕೇಂದ್ರ ಜಿಎಸ್‍ಟಿ ಇಲಾಖೆ ಶೋಕಾಸ್ ನೋಟಿಸ್ ಕಳುಹಿಸಿದೆ.