ಚುರಲ್ಮಲಾ: ಅಗ್ನಿಶಾಮಕ ರಕ್ಷಣಾ ತಂಡವು ವಯನಾಡಿನ ಚುರಲ್ಮಲಾದಲ್ಲಿ 4 ಲಕ್ಷ ರೂಪಾಯಿ ನೋಟುಗಳ ಬಂಡಲ್ ಗಳನ್ನು ಪತ್ತೆ ಮಾಡಿದೆ.
ಚುರಲ್ ಬೆಟ್ಟದ ವೆಳ್ಳರ್ಮಲಾ ಶಾಲೆಯ ಹಿಂದಿನಿಂದ ಬೆಟ್ಟದ ನೀರು ಹರಿದು ಬಂದ ಹಾದಿಯಲ್ಲಿ ಬಂಡೆಗಳ ನಡುವೆ ಹುಡುಕಾಟ ನಡೆಸುತ್ತಿದ್ದ ರಕ್ಷಣಾ ಸಿಬ್ಬಂದಿಗೆ ಮಣ್ಣಿನಿಂದ ಆವೃತವಾದ ನೋಟುಗಳು ಪತ್ತೆಯಾಗಿವೆ. ನೋಟುಗಳನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ಸುತ್ತಿ ಇರಿಸÀಲಾಗಿತ್ತು. ಬಂಡೆಯ ಮೇಲೆ ಸಿಲುಕಿಕೊಂಡಿದ್ದರಿಂದ ತೇಲಿ ಹೋಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಕವರ್‍ನಲ್ಲಿರುವುದರಿಂದ ಹೆಚ್ಚಿನ ಹಾನಿಯಾಗಿಲ್ಲ. ಆದರೆ, ನೋಟುಗಳು ಕೆಸರುಮಯವಾದ ಸ್ಥಿತಿಯಲ್ಲಿವೆ. 500 ನೋಟು ಇರುವ ಏಳು ಬಂಡಲ್ ಹಾಗೂ 100 ನೋಟು ಇರುವ ಐದು ಬಂಡಲ್ ಗಳು ಲಭಿಸಿವೆ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರಾಜೀಶ್ ತಿಳಿಸಿದ್ದಾರೆ.
ಎರಡು ವಾರ ಕಳೆದರೂ ಆ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಪರಿಶೋಧನೆಯ ನಡುವೆ ಕಲ್ಲುಗಳ ಎಡೆಗಳಲ್ಲಿ ಏನಾದರೂ ಇದೆಯೇ ಎಂದು ನೋಡಲು ಗುದ್ದಲಿಯಿಂದ ಬಂಡೆಗಳ ನಡುವೆ ಮಣ್ಣನ್ನು ಅಗೆಯುವುದು ಮುಂತಾದ ಕಾರ್ಯಾಚರಣೆ ನಡೆಯುತ್ತಿದೆ. ಈ ವೇಳೆ ಕವರ್ ಗಮನಕ್ಕೆ ಬಂತು. ವ್ಯಾಪಾರ ಉದ್ದೇಶಕ್ಕಾಗಿ ಅಥವಾ ಬೇರೆ ಉದ್ದೇಶಕ್ಕಾಗಿ ಹಣವನ್ನು ಇಟ್ಟುಕೊಂಡಿರಬಹುದು ಎಂದು ತೀರ್ಮಾನಿಸಲಾಗಿದೆ. ಅಗ್ನಿಶಾಮಕ ದಳದ ಅಧಿಕಾರಿ ಸುಭಾಷ್ ಹಣ ಪತ್ತೆ ಮಾಡಿದರು. ಹಣ ಯಾರದ್ದು ಎಂಬುದು ಸ್ಪಷ್ಟವಾಗಿಲ್ಲ. ಈ ಪರಿಸರ ಕೇಂದ್ರೀಕರಿಸಿ ವಾಸಿಸಿದವರ ಬಗ್ಗೆ ಗುರುತಿಸಲಾಗುತ್ತಿದೆ ಮತ್ತು ಹೆಚ್ಚಿನ ತಪಾಸಣೆ ಪ್ರಗತಿಯಲ್ಲಿದೆ.
ಮುಂದಿನ ಕ್ರಮಕ್ಕಾಗಿ ಪೋಲೀಸರು ಹಣವನ್ನು ತೆಗೆದುಕೊಂಡಿದ್ದಾರೆ. ಅನಾಹುತಕ್ಕೆ ಒಳಗಾದ ಹಲವರ ಹಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳು ನಷ್ಟವಾಗಿದ್ದು, ಈ ಮೊತ್ತವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.