ಲಖನೌ: ಧಾರ್ಮಿಕ ನಗರಿ ಅಯೋಧ್ಯೆಯ ಸೌಂದರ್ಯವನ್ನು ಹೆಚ್ಚಿಸುವ ಕ್ರಮವಾಗಿ ಅಲ್ಲಿನ ರಾಮಪಥದಲ್ಲಿ ಅಳವಡಿಸಲಾಗಿದ್ದ ಸುಮಾರು 4 ಸಾವಿರ ಆಲಂಕಾರಿಕ ವಿದ್ಯುತ್ ದೀಪಗಳು ಕಳ್ಳತನವಾಗಿವೆ.
ಪೊಲೀಸ್ ಮೂಲಗಳ ಪ್ರಕಾರ, ಕಳ್ಳತನವಾಗಿರುವ ವಿದ್ಯುತ್ ದೀಪಗಳಲ್ಲಿ 3,800 ಬಾಂಬೂ ಲೈಟ್‌ಗಳು, 36 ಗೊಬೊ ಪ್ರಾಜೆಕ್ಟರ್ ಲೈಟ್‌ಗಳು ಸೇರಿವೆ.
ದೀಪ ಅಳವಡಿಸಲು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದಿದ್ದ ನಿರ್ವಹಣಾ ಸಂಸ್ಥೆಯು ಈ ಸಂಬಂಧ ಪೊಲೀಸರಿಗೆ ದೂರು ನೀಡಿದೆ.
ದೀಪಗಳ ಪರಿಶೀಲನೆ ವೇಳೆ ಸಂದರ್ಭದಲ್ಲಿ ಈ ಕೃತ್ಯ ಗೊತ್ತಾಗಿದೆ. ದೊಡ್ಡ ಪ್ರಮಾಣದಲ್ಲಿ ಆಲಂಕಾರಿಕ ವಿದ್ಯುತ್ ದೀಪಗಳು ಕಳುವಾಗಿರುವುದು ಪಟ್ಟಣದ ಸಂತರು, ಸ್ವಾಮೀಜಿಗಳಿಗೂ ಆತಂಕ ಮೂಡಿಸಿದೆ. ಪೊಲೀಸರ ಕರ್ತವ್ಯಬದ್ಧತೆಯನ್ನೇ ಪ್ರಶ್ನಿಸುವಂತಾಗಿದೆ.
ಈ ಮಾರ್ಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅಸಂಖ್ಯ ಸಂಖ್ಯೆಯಲ್ಲಿ ಪೊಲೀಸರ ಉಪಸ್ಥಿತಿ ಇದೆ. ಆದರೂ ಕಳ್ಳತನ ಆಗಿದೆ. ಈ ಕುರಿತು ಸಮಗ್ರ ತನಿಖೆ ಅಗತ್ಯ ಎಂದು ಸ್ವಾಮೀಜಿಯೊಬ್ಬರು ಪ್ರತಿಕ್ರಿಯಿಸಿದರು.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸಂಸ್ಥೆ ನೀಡಿರುವ ದೂರು ಆಧರಿಸಿ ತನಿಖೆ ನಡೆಯುತ್ತಿದೆ. ಒಂದು ವೇಳೆ ನೀಡಲಾಗಿರುವ ದೂರು ಸುಳ್ಳು ಎಂದು ದೃಢಪಟ್ಟಲ್ಲಿ ಸಂಸ್ಥೆಯ ವಿರುದ್ಧವೇ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.
ನೂತನ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆ ನಗರದ ಸೌಂದರ್ಯೀಕರಣ ಕಾರ್ಯವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು.
ಅಯೋಧ್ಯೆ ನಗರದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿದ್ದ ರಸ್ತೆಗಳು ಇತ್ತೀಚೆಗೆ ಹಾನಿಗೊಂಡಿದ್ದವು. ಅಲ್ಲದೆ, ಭಾರಿ ಮಳೆಯಾದ ಹಿಂದೆಯೆ ನೂತನ ರಾಮಮಂದಿರದಲ್ಲಿಯೂ ಸೋರಿಕೆ ಉಂಟಾಗಿತ್ತು. ಈ ಬೆಳವಣಿಗೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು.