HEALTH TIPS

ಎಸ್‌ಬಿಐಗೆ ₹50 ಲಕ್ಷ ವಂಚನೆ: 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

 ಹೈದರಾಬಾದ್‌: 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬ್ಯಾಂಕ್‌ ವಂಚನೆ ಆರೋಪಿ ವಿ. ಚಲಪತಿ ರಾವ್‌ ಎಂಬುವವನನ್ನು ತಮಿಳುನಾಡಿನ ತಿರುನಲ್ವೇಲಿಯ ನರಸಿಂಗನಲ್ಲೂರು ಗ್ರಾಮದಲ್ಲಿ ಆಗಸ್ಟ್‌ 4ರಂದು ಸಿಬಿಐ ಬಂಧಿಸಿದೆ.

ಈತ ಮೃತಪಟ್ಟಿರುವುದಾಗಿ ನ್ಯಾಯಾಲಯವೊಂದು ಕೆಲ ವರ್ಷಗಳ ಹಿಂದೆ ಘೋಷಿಸಿತ್ತು.

ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆತ ತನ್ನ ಗುರುತನ್ನು ಆಗಾಗ ಬದಲಾಯಿಸಿಕೊಳ್ಳುತ್ತಿದ್ದ ಎಂದು ಸಿಬಿಐ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಎಸ್‌ಬಿಐನ ಹೈದರಾಬಾದ್‌ನ ಚಂದೂಲಾಲ್‌ ಬಿರಾದಾರಿ ಶಾಖೆಯಲ್ಲಿ ಚಲಪತಿ ಕಂಪ್ಯೂಟರ್‌ ಆಪರೇಟರ್‌ ವೃತ್ತಿಯಲ್ಲಿದ್ದನು. ಬ್ಯಾಂಕ್‌ಗೆ ₹50 ಲಕ್ಷ ವಂಚನೆ ಎಸಗಿರುವ ಆರೋಪದ ಮೇಲೆ ಆತನ ವಿರುದ್ಧ ಸಿಬಿಐ 2002ರ ಮೇನಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. 2004ರ ಡಿಸೆಂಬರ್‌ 31ರಂದು ಎರಡು ಆರೋಪಪಟ್ಟಿಗಳನ್ನು ಸಲ್ಲಿಸಿತ್ತು. 2004ರಿಂದಲೂ ಆರೋಪಿ ನಾಪತ್ತೆಯಾಗಿದ್ದಾನೆ.

ಆರೋಪಿಯು ಮೃತಪಟ್ಟಿದ್ದಾನೆ ಎಂದು ಅವರ ಪತ್ನಿ (ಪ್ರಕರಣದ ಸಹ ಆರೋಪಿ) ಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಏಳು ವರ್ಷ ಆತನ ಸುಳಿವು ಪತ್ತೆಯಾಗದ ಕಾರಣ ಆತ ಮೃತಪಟ್ಟಿರುವುದಾಗಿ ನ್ಯಾಯಾಲಯ ಘೋಷಿಸಿತು.

ಗುರುತು ಬದಲಾವಣೆ: ಪದೇ ಪದೇ ತನ್ನ ಗುರುತು ಮತ್ತು ವಿಳಾಸ ಬದಲಿಸುತ್ತಿದ್ದ ಚಲಪತಿ ಮೊದಲಿಗೆ ಹೈದರಾಬಾದ್‌ನಿಂದ ಸೇಲಂಗೆ ಪರಾರಿಯಾಗಿದ್ದ. ತನ್ನ ಹೆಸರನ್ನು ಎಂ. ವಿನೀತ್‌ ಕುಮಾರ್‌ ಎಂದು ಬದಲಿಸಿಕೊಂಡು, 2007ರಲ್ಲಿ ಮತ್ತೊಂದು ಮದುವೆಯಾಗಿದ್ದ.


ಇದ್ದಕ್ಕಿದ್ದ ಹಾಗೆ 2014ರಲ್ಲಿ ಸೇಲಂ ತೊರೆದಿದ್ದ ಆತ ಬಳಿಕ ಮಧ್ಯಪ್ರದೇಶದ ಭೋಪಾಲ್‌, ಉತ್ತರಾಖಂಡದ ರುದ್ರಪುರದಲ್ಲಿ ನೆಲೆಸಿದ್ದನು. ಆ ಬಳಿಕ ಔರಂಗಾಬಾದ್‌ ಆಶ್ರಮವೊಂದರಲ್ಲಿ ಕೆಲಕಾಲ ನೆಲೆಸಿದ್ದ ಆತ, ಆಶ್ರಮಕ್ಕೆ ₹70 ಲಕ್ಷ ವಂಚನೆ ಮಾಡಿರುವ ಆರೋಪವನ್ನೂ ಹೊತ್ತಿದ್ದಾನೆ. ಅಲ್ಲಿ ತನ್ನನ್ನು ತಾನು ದೇವಮಾನವ ಎಂದು ಅವನು ಕರೆದುಕೊಂಡಿದ್ದ ಎಂದು ಸಿಬಿಐ ಹೇಳಿದೆ.

ಆ ನಂತರ ರಾಜಸ್ಥಾನ ಮತ್ತು ತಿರುನೆಲ್ವೇಲಿಯಲ್ಲಿ ನೆಲೆಸಿದ್ದ. ಈ ಅವಧಿಯಲ್ಲಿ ಆತ 10 ಬಾರಿ ಮೊಬೈಲ್‌ ಸಂಖ್ಯೆಯನ್ನು ಬದಲಿಸಿದ್ದಾನೆ ಮತ್ತು ಹಲವು ಬಾರಿ ಆಧಾರ್‌ ಗುರುತಿನ ಚೀಟಿಯನ್ನೂ ಬದಲಿಸಿದ್ದಾನೆ ಎಂದು ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries