ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್‌ಪಿಎಸ್) ಇರುವ ಸುಮಾರು 23 ಲಕ್ಷ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇ 50ರಷ್ಟನ್ನು ಪಿಂಚಣಿಯಾಗಿ ನೀಡಲು ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ.
2004ರ ಏಪ್ರಿಲ್ 1ರ ಬಳಿಕ ಕೆಲಸಕ್ಕೆ ಸೇರಿದ ನೌಕರರಿಗೆ ಎನ್‌ಪಿಎಸ್ ಅನ್ವಯವಾಗುತ್ತಿದೆ.
ಎನ್‌ಪಿಎಸ್ ಆಯ್ಕೆ ಮಾಡಿಕೊಂಡಿರುವ ನೌಕರರಿಗೆ ಈಗ ಏಕೀಕೃತ ಪಿಂಚಣಿ ಯೋಜನೆಯ ಆಯ್ಕೆಗೆ ಅವಕಾಶ ಸಿಗಲಿದೆ. ಕನಿಷ್ಠ 25 ವರ್ಷ ಕೆಲಸ ಮಾಡಿದವರಿಗೆ ಮೂಲ ವೇತನದ ಶೇ 50ರಷ್ಟು ಪಿಂಚಣಿಯಾಗಿ ಸಿಗಲಿದೆ. ಅದಕ್ಕಿಂತ ಕಡಿಮೆ ವರ್ಷ ಕೆಲಸ ಮಾಡಿದವರಿಗೆ ಸಿಗುವ ಪಿಂಚಣಿಯ ಮೊತ್ತ ಕಡಿಮೆಯಾಗಲಿದೆ.
ಸರ್ಕಾರಿ ನೌಕರರ ಪಿಂಚಣಿ ಯೋಜನೆಯನ್ನು ಪರಿಶೀಲಿಸಲು ಹಣಕಾಸು ಸಚಿವಾಲಯವು ಕಳೆದ ವರ್ಷ ಹಣಕಾಸು ಕಾರ್ಯದರ್ಶಿ ಟಿ.ವಿ ಸೋಮನಾಥನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಈಗಿನ ನಿಯಮಗಳಲ್ಲಿ ಅಗತ್ಯವಿದ್ದರೆ ಬದಲಾವಣೆಗಳನ್ನು ತರುವಂತೆ ಸೂಚಿಸಿತ್ತು.
ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ಹಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್) ವಾಪಸಾಗಲು ನಿರ್ಧರಿಸಿದ್ದವು. ಕೆಲವು ರಾಜ್ಯಗಳಲ್ಲಿ ನೌಕರರ ಸಂಘಟನೆಗಳು ಕೂಡಾ ಒಪಿಎಸ್ ಜಾರಿಗೆ ಒತ್ತಾಯಿಸುತ್ತಾ ಬಂದಿವೆ.
ಯುಪಿಎಸ್ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ನಿಯೋಜಿತ ಸಂಪುಟ ಕಾರ್ಯದರ್ಶಿ ಟಿ.ವಿ ಸೋಮನಾಥನ್, ಹೊಸ ಯೋಜನೆಯು 2025ರ ಏಪ್ರಿಲ್ 1ರಿಂದ ಅನ್ವಯವಾಗಲಿದೆ ಎಂದು ಹೇಳಿದರು.
ಏಕೀಕೃತ ಪಿಂಚಣಿ ಯೋಜನೆಯ ಪ್ರಯೋಜನಗಳು ನಿವೃತ್ತಿ ಹೊಂದಿದವರಿಗೆ ಮತ್ತು 2025ರ ಮಾರ್ಚ್ 31ರವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಲಿರುವರಿಗೆ ಅನ್ವಯವಾಗಲಿದೆ ಎಂದು ತಿಳಿಸಿದರು.
ಏಕೀಕೃತ ಪಿಂಚಣಿ ಯೋಜನೆಯ ಪ್ರಮುಖ ಅಂಶಗಳುಕನಿಷ್ಠ 10 ವರ್ಷಗಳ ಸೇವೆಯ ಬಳಿಕ ನಿವೃತ್ತಿಯಾಗುವ ಸರ್ಕಾರಿ ನೌಕರರಿಗೆ ತಿಂಗಳಿಗೆ ₹ 10,000 ಪಿಂಚಣಿಯ ಭರವಸೆಯನ್ನು ಇದು ನೀಡುತ್ತದೆ
ಪಿಂಚಣಿದಾರರ ಸಾವಿನ ಬಳಿಕ ಅವರ ಕುಟುಂಬಕ್ಕೆ ಶೇ 60ರಷ್ಟು (ಪಿಂಚಣಿದಾರ ಪಡೆದ ಕೊನೆಯ ತಿಂಗಳ ಪಿಂಚಣಿ ಮೊತ್ತದಲ್ಲಿ) ಕುಟುಂಬ ಪಿಂಚಣಿ ದೊರೆಯಲಿದೆ
ಪ್ರಸ್ತುತ ಚಾಲ್ತಿಯಲ್ಲಿರುವ ಎನ್‌ಪಿಎಸ್‌ನಲ್ಲಿ ನೌಕರರು ಶೇ 10ರಷ್ಟು ಕೊಡುಗೆ ನೀಡುತ್ತಿದ್ದರೆ, ಕೇಂದ್ರ ಸರ್ಕಾರ ಶೇ 14ರಷ್ಟು ಕೊಡುಗೆ ನೀಡುತ್ತಿದೆ. ಯುಪಿಎಸ್‌ನಲ್ಲಿ ಕೇಂದ್ರದ ಕೊಡುಗೆ ಶೇ 18.5ಕ್ಕೆ ಏರಲಿದ್ದು, ನೌಕರರ ಕೊಡುಗೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ
ಪಿಂಚಣಿಯ ಬಾಕಿ ಪಾವತಿಗೆ ₹ 800 ಕೋಟಿ ಖರ್ಚಾಗುತ್ತದೆ. ಅಲ್ಲದೆ ಕೇಂದ್ರದ ಕೊಡುಗೆಯ ಪಾಲು ಏರುವುದರಿಂದ ಹೆಚ್ಚುವರಿಯಾಗಿ ₹6,250 ಕೋಟಿ ಹೊರೆಯಾಗುತ್ತದೆ
ರಾಜ್ಯ ಸರ್ಕಾರಗಳು ಯುಪಿಎಸ್ ಸೇರಲು ಬಯಸಿದರೆ, ಈ ಯೋಜನೆಯಿಂದ ಪ್ರಯೋಜನ ಪಡೆಯುವ ನೌಕರರ ಸಂಖ್ಯೆ 90 ಲಕ್ಷಕ್ಕೆ ಏರಲಿದೆ. ಆಗ, ಆಯಾ ರಾಜ್ಯ ಸರ್ಕಾರಗಳು ಹೆಚ್ಚುವರಿ ಹೊರೆಯನ್ನು ಭರಿಸಬೇಕಾಗುತ್ತದೆ
ಗ್ರಾಚ್ಯುಟಿಯ ಜತೆಗೆ ನಿವೃತ್ತಿ ವೇಳೆಯಲ್ಲಿ ನೌಕರರಿಗೆ ಇಡುಗಂಟು ಸಿಗಲಿದೆ. ನೌಕರ ಪೂರ್ಣಗೊಳಿಸಿದ ಪ್ರತಿ 6 ತಿಂಗಳ ಸೇವೆಗೆ ಅನ್ವಯವಾಗುವಂತೆ ಒಂದು ತಿಂಗಳ ಮೂಲ ವೇತನ ಮತ್ತು ಡಿ.ಎಯ 10ನೇ 1 ಭಾಗವನ್ನು ಇದು ಒಳಗೊಂಡಿರುತ್ತದೆ.