ಚೆನ್ನೈ: ಸ್ವಾತಂತ್ರ್ಯ ದಿನಾಚರಣೆ ದಿನದಂದು ರಾಜ್ಯಗಳ ರಾಜಧಾನಿಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಗೌರವ ಮುಖ್ಯಮಂತ್ರಿಗಳಿಗೆ ದೊರೆತು ಬರೋಬ್ಬರಿ 50 ವರ್ಷಗಳಾಗಿವೆ.
ದೇಶಕ್ಕೆ ಸ್ವಾತಂತ್ರ್ಯ ದೊರೆತ 27 ವರ್ಷಗಳ ಬಳಿಕ, ಅಂದರೆ 1974ರಲ್ಲಿ ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯಗಳಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸುವ ಅವಕಾಶ ಸಿಕ್ಕಿತು.
ಮುಖ್ಯಮಂತ್ರಿಗಳಿಗೆ ಈ ಅವಕಾಶ ದೊರೆಯಲು ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಕಾರಣ. ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ದಿನಗಳಂದು ತ್ರಿವರ್ಣ ಧ್ವಜಾರೋಹಣದ ಅವಕಾಶ ರಾಜ್ಯಪಾಲರಿಗೆ ಮಾತ್ರ ಇರುವುದು ಕರುಣಾನಿಧಿ ಅವರನ್ನು ಕೆರಳಿಸಿತ್ತು.
ಇಂದಿರಾಗೆ ಪತ್ರ ಬರೆದಿದ್ದ ಕರುಣಾನಿಧಿ:
ಈ ಕುರಿತು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರಿಗೆ 1974ರ ಫೆಬ್ರುವರಿಯಲ್ಲಿ ಪತ್ರ ಬರೆದಿದ್ದ ಕರುಣಾನಿಧಿ ಅವರು, 'ರಾಜ್ಯಗಳ ಚುನಾಯಿತ ಮುಖ್ಯಮಂತ್ರಿಗೆ ಅನ್ಯಾಯ ಮಾಡಲಾಗುತ್ತಿದೆ' ಎಂದು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಜುಲೈನಲ್ಲಿ ಈ ಕುರಿತು ಆದೇಶ ಹೊರಡಿಸಿದ ಕೇಂದ್ರ ಸರ್ಕಾರ, 'ಸ್ವಾತಂತ್ರ್ಯ ದಿನಾಚರಣೆ ದಿನದಂದು ರಾಜ್ಯಗಳಲ್ಲಿ ಮುಖ್ಯಮಂತ್ರಿಯವರು ರಾಷ್ಟ್ರಧ್ವಜಾರೋಹಣ ಮಾಡಬೇಕು' ಎಂದು ಹೇಳಿತು. ಅದಾಗ್ಯೂ ಗಣರಾಜ್ಯೋತ್ಸವ ದಿನದಂದು ಈ ಗೌರವ ರಾಜ್ಯಪಾಲರ ಬಳಿಯೇ ಉಳಿಯಿತು.
ಹೀಗಾಗಿ 50 ವರ್ಷಗಳ ಹಿಂದೆ ಮುಖ್ಯಮಂತ್ರಿಗಳು ಮೊದಲ ಬಾರಿಗೆ ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು.
'ಡಿಎಂಕೆ ಇಯರ್ಸ್' ಮತ್ತು ದ್ರಾವಿಡ ದಿಗ್ಗಜರಾದ ಸಿ.ಎನ್.ಅಣ್ಣಾದೊರೈ, ಎಂ.ಜಿ ರಾಮಚಂದ್ರನ್ ಅವರ ಜೀವನಚರಿತ್ರೆಗಳ ಲೇಖಕರಾದ ಆರ್. ಕಣ್ಣನ್ ಅವರು, '1974ರಿಂದ ಈ ಗೌರವ ದೊರೆತ ಕಾರಣಕ್ಕೆ ದೇಶದ ಮುಖ್ಯಮಂತ್ರಿಗಳು ಕರುಣಾನಿಧಿ ಅವರಿಗೆ ಕೃತಜ್ಞರಾಗಿರಬೇಕು' ಎಂದು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
ಆತ್ಮಗೌರವದ ವಿಷಯ:
ಇದು ಆತ್ಮಗೌರವದ ವಿಷಯವಾಗಿದೆ ಎಂದು ಭಾವಿಸಿದ್ದ ಕರುಣಾನಿಧಿ ಅವರು ಈ ಕುರಿತು ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಕರುಣಾನಿಧಿ ಅವರ ಮನವಿಗೆ ಕೇಂದ್ರ ಸರ್ಕಾರ ಸಮ್ಮತಿಸಿತು. 1974ರ ಆಗಸ್ಟ್ 15ರಂದು ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ಆ ಬಳಿಕ ಅವರಿಗೆ 14 ಬಾರಿ ತ್ರಿವರ್ಣಧ್ವಜ ಹಾರಿಸುವ ಗೌರವ ದೊರೆತಿತ್ತು ಎಂದು ಅವರು ತಿಳಿಸಿದರು.