ತೈಪೆ: ತೈವಾನ್‌ನ ಪೂರ್ವ ಕರಾವಳಿಯಲ್ಲಿ ಶುಕ್ರವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ (ಯುಎಸ್‌ಜಿಎಸ್) ತಿಳಿಸಿದೆ.
ಆದರೆ ಭೂಕಂಪದಿಂದ ದೊಡ್ಡ ಹಾನಿ ವರದಿಯಾಗಿಲ್ಲ ಎಂದು ದ್ವೀಪ ರಾಷ್ಟ್ರದ ಸರ್ಕಾರವು ಖಚಿತಪಡಿಸಿದೆ.
ಹುವಾಲಿಯನ್ ಸಮೀಪ 15 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ.
ತೈವಾನ್‌ನ ಕೇಂದ್ರ ಹವಾಮಾನ ಇಲಾಖೆಯು ಆರಂಭದಲ್ಲಿ 6.3 ತೀವ್ರತೆಯ ಭೂಕಂಪದ ಕುರಿತು ವರದಿ ಮಾಡಿತ್ತು. ಜನರು ಗಾಬರಿಗೊಳ್ಳದೆ ಸುರಕ್ಷಿತ ಸ್ಥಳದಲ್ಲಿಯೇ ಇರುವಂತೆಯೇ ಮೊಬೈಲ್ ಸಂದೇಶದ ಮೂಲಕ ಎಚ್ಚರಿಕೆಯನ್ನು ರವಾನಿಸಿತ್ತು.
ಹುವಾಲಿಯನ್‌ನಲ್ಲಿ ಭೂಕಂಪದ ಸಮಯದಲ್ಲಿ ಎಲಿವೇಟರ್‌ನಲ್ಲಿ ಸಿಕ್ಕಿಬಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಅಮ್ನಿಶಾಮಕ ದಳ ತಿಳಿಸಿದೆ.
ದೊಡ್ಡ ಹಾನಿ ಸಂಭವಿಸಿಲ್ಲ. ಹೈಸ್ಪೀಡ್ ರೈಲುಗಳು, ಮೆಟ್ರೊ ವ್ಯವಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಏಜೆನ್ಸಿ ತಿಳಿಸಿದೆ.
ತೈವಾನ್, ಎರಡು ಭೂಪದರ ಸೇರುವ ಭಾಗದಲ್ಲಿರುವುದರಿಂದ ಇಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತಿರುತ್ತವೆ.
ಹುವಾಲಿಯನ್‌ನಲ್ಲೇ ಏಪ್ರಿಲ್ ತಿಂಗಳಲ್ಲಿ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಅಲ್ಲಿ 25 ವರ್ಷಗಳಲ್ಲೇ ಸಂಭವಿಸಿದ್ದ ಪ್ರಬಲ ಭೂಕಂಪ ಇದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದರು. ವ್ಯಾಪಕ ಭೂಕುಸಿತ ಹಾಗೂ ಕಟ್ಟಡಗಳಿಗೆ ಹಾನಿಯಾಗಿತ್ತು.
1999ನೇ ಇಸವಿಯಲ್ಲಿ ತೈವಾನ್ ಇತಿಹಾಸದಲ್ಲೇ ಅತಿ ತೀವ್ರ ರಿಕ್ಟರ್ ಮಾಪಕದಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ ಸುಮಾರು 2,400 ಮಂದಿ ಮೃತಪಟ್ಟಿದ್ದರು.