HEALTH TIPS

ಬಾಂಗ್ಲಾ ಹಿಂಸಾಚಾರ | ಈವರೆಗೆ 650 ಮಂದಿ ಸಾವು: UN ವರದಿ

 ಢಾಕಾ/ಜಿನೀವಾ: ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಜುಲೈ 16 ರಿಂದ ಆಗಸ್ಟ್ 11ರ ನಡುವೆ ಸುಮಾರು 650 ಮಂದಿ ಮೃತಪಟ್ಟಿದ್ದಾರೆ ಎಂದು ಯುಎನ್ ಮಾನವ ಹಕ್ಕುಗಳ ಕಚೇರಿ ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿದೆ.

ಜುಲೈ 16ರಿಂದ ಆಗಸ್ಟ್ 4ರ ನಡುವೆ ನಡೆದ ಹಿಂಸಾಚಾರದಲ್ಲಿ ಸುಮಾರು 400 ಜನ ಸಾವಿಗೀಡಾಗಿದ್ದಾರೆ.

ಆಗಸ್ಟ್ 5 ಮತ್ತು 6ರ ನಡುವೆ ಸುಮಾರು 250 ಜನ ಮೃತಪಟ್ಟಿದ್ದಾರೆ ಎಂದು 'Preliminary Analysis of Recent Protests and Unrest in Bangladesh' ಎಂಬ ಶೀರ್ಷಿಕೆಯ 10 ಪುಟಗಳ ವರದಿಯಲ್ಲಿ ಹೇಳಲಾಗಿದೆ.

ಜುಲೈ 16 ರಿಂದ ಆಗಸ್ಟ್ 11ರ ನಡುವೆ ನಡೆದ ಪ್ರತಿಭಟನೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ಮತ್ತು ಸಾರ್ವಜನಿಕ ವರದಿಗಳು ಕೂಡ ಬಹಿರಂಗಪಡಿಸಿವೆ.

ಆಗಸ್ಟ್ 7 ರಿಂದ 11ರ ನಡುವೆ ಹಲವರು ಸಾವಿಗೀಡಾಗಿದ್ದಾರೆ. ಅವರಲ್ಲಿ ಹಿಂಸಾಚಾರದ ವೇಳೆ ಗಾಯಗೊಂಡು ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೂ ಸೇರಿದ್ದಾರೆ ಎಂದು ಯುಎನ್‌ಎಚ್‌ಸಿಆರ್‌ ಶುಕ್ರವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಮೃತರಲ್ಲಿ ಪ್ರತಿಭಟನಾಕಾರರು, ಪತ್ರಕರ್ತರು, ಭದ್ರತಾ ಪಡೆಗಳ ಸಿಬ್ಬಂದಿ ಹಾಗೂ ಅಲ್ಲಿ ನೆರೆದಿದ್ದ ಜನರು ಸೇರಿದ್ದಾರೆ, ಸಾವಿರಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಆಸ್ಪತ್ರೆಗಳು ಗಾಯಳುಗಳಿಂದ ತುಂಬಿವೆ. ಕರ್ಫ್ಯೂ ಮತ್ತು ಇಂಟರ್ನೆಟ್ ಸ್ಥಗಿತದಿಂದಾಗಿ ಮಾಹಿತಿ ಸಂಗ್ರಹಣೆಗೆ ಅಡಚಣೆ ಉಂಟಾಗಿದೆ. ಹಾಗಾಗಿ ವರದಿಯಾದ ಸಾವಿನ ಸಂಖ್ಯೆ ಕಡಿಮೆ ಅಂದಾಜು ಮಾಡಲಾಗಿದೆ. ಅಲ್ಲದೆ, ಮೃತರು ಮತ್ತು ಗಾಯಗೊಂಡವರ ವಿವರಗಳನ್ನು ಒದಗಿಸದಂತೆ ರಾಜ್ಯ ಅಧಿಕಾರಿಗಳು ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ವಿವಾದಾತ್ಮಕ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ದೇಶದಲ್ಲಿ ಸೃಷ್ಟಿಯಾದ ಅರಾಜಕತೆಗೆ ನಲುಗಿದ ಶೇಖ್‌ ಹಸೀನಾ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಆಗಸ್ಟ್ 5 ರಂದು ಭಾರತಕ್ಕೆ ಪಲಾಯನ ಮಾಡಿದ್ದರು. ಹಸೀನಾ ದೇಶ ಬಿಟ್ಟ ಬಳಿಕವೂ ಕೆಲಕಾಲ ಹಿಂಸಾಚಾರ ಮುಂದುವರಿದಿತ್ತು.

ಬಾಂಗ್ಲಾ ಸ್ವಾತಂತ್ರ್ಯ ಸಮರದಲ್ಲಿ ಭಾಗಿಯಾಗಿದ್ದವರ ಸಂಬಂಧಿಕರಿಗೆ ಸರ್ಕಾರದ ಹುದ್ದೆಗಳಲ್ಲಿ ಶೇ 30ರಷ್ಟು ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮೀಸಲು ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆಯಾಗಿತ್ತು.

ಹಸೀನಾ ನೇತೃತ್ವದ ಸರ್ಕಾರದ ಪತನದ ನಂತರ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries