ಐಜ್ವಾಲ್: ಮಿಜೋರಾಂನ ಲಾಂಗ್‌ಟಲೈ ಜಿಲ್ಲೆ ಹಾಗೂ ಮ್ಯಾನ್ಮರ್‌ನ ಚಿನ್ ರಾಜ್ಯದ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶಿತ ಸಾಂಗೌ-ಸೈಸಿಚ್‌ಹೌ ರಸ್ತೆ ನಿರ್ಮಾಣ ಯೋಜನೆಗೆ ಪ್ರಾಥಮಿಕ ಹಂತದಲ್ಲಿ ಬಿಡುಗಡೆಯಾಗಿದ್ದ ₹ 66 ಕೋಟಿ ಅನುದಾನವನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಶುಕ್ರವಾರ ತಿಳಿಸಿದ್ದಾರೆ.
ಮಜೋರಾಂ ರಾಜ್ಯಸಭಾ ಸದಸ್ಯ ಕೆ.ವನ್ಲಲ್ವೆನ ಅವರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಪತ್ರದ ಮೂಲಕ ಮಜುಂದಾರ್ ಉತ್ತರ ನೀಡಿದ್ದಾರೆ.
ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯನ್ನು ಉಲ್ಲೇಖಿಸಿರುವ ಅವರು, 'ಗಡಿ ರಸ್ತೆ ನಿರ್ಮಾಣಕ್ಕೆ 2021ರ ಫೆಬ್ರುವರಿಯಲ್ಲಿ ₹ 66.08 ಕೋಟಿ ಬಿಡುಗಡೆ ಮಾಡಲಾಗಿತ್ತು. ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಮೂಲಕ ಯೋಜನೆ ಕಾರ್ಯಗತಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರವು ಈ ವರ್ಷ ಜುಲೈ ವೇಳೆಗೆ ಯೋಜನೆಗೆ ಅಗತ್ಯ ಭೂಮಿಯನ್ನು ಉಚಿತವಾಗಿ ಮಂಜೂರು ಮಾಡಲು ವಿಫಲವಾದ ಕಾರಣ, ಅನುದಾನವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ' ಎಂದು ತಿಳಿಸಿದ್ದಾರೆ.
ಈಶಾನ್ಯ ಪ್ರದೇಶ ಅಭಿವೃದ್ಧಿ ಇಲಾಖೆಯ ರಾಜ್ಯ ಖಾತೆ ಸಚಿವರಾಗಿರುವ ಮಜುಂದಾರ್, ಸಾಂಗೌ-ಸೈಸಿಚ್‌ಹೌ ರಸ್ತೆ ಯೋಜನೆಯನ್ನು ಸದ್ಯ ತಿಂಗಸೈನಿಂದ ಪಾಂಗಖೌ-ಸಾಂಗೌ ರಸ್ತೆ ಯೋಜನೆಯಲ್ಲಿ ಸೇರಿಸಲಾಗಿದೆ. ಇದು ಬಿಆರ್‌ಒ ಯೋಜನೆ ಅಡಿಯ ಜನಲ್ ಸ್ಟಾಫ್ ಪಂಡಿಂಗ್ ವ್ಯವಸ್ಥೆ ವ್ಯಾಪ್ತಿಗೆ ಬರುತ್ತದೆ ಎಂದಿದ್ದಾರೆ.