HEALTH TIPS

69 ಸಾವಿರ ಶಿಕ್ಷಕರ ನೇಮಕ ಪ್ರಕರಣ: ಹೊಸ ಆಯ್ಕೆಪಟ್ಟಿ ಪ್ರಕಟಿಸಲು ಕೋರ್ಟ್ ಸೂಚನೆ

 ಖನೌ: ಉತ್ತರ ಪ್ರದೇಶದ 69,000 ಸಹಾಯಕ ಶಿಕ್ಷಕರ ನೇಮಕಾತಿಗೆ ಹೊಸದಾಗಿ ಆಯ್ಕೆಪಟ್ಟಿ ಸಿದ್ಧಪಡಿಸುವಂತೆ ಅಲಹಾಬಾದ್‌ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

6,800 ಅಭ್ಯರ್ಥಿಗಳು ಸೇರಿದಂತೆ 2022ರ ಜನವರಿ ಮತ್ತು 2020ರ ಜೂನ್‌ನಲ್ಲಿ ಪ್ರಕಟವಾಗಿರುವ ಆಯ್ಕೆಪಟ್ಟಿಯನ್ನು ಹೈಕೋರ್ಟ್‌ ಅನೂರ್ಜಿತಗೊಳಿಸಿದೆ.

ಹೈಕೋರ್ಟ್‌ನ ಏಕ ಸದಸ್ಯ ಪೀಠ ಮಾರ್ಚ್‌ 13ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಹೇಂದ್ರ ಪಾಲ್‌ ಮತ್ತು ಇತರ 90 ವಿಶೇಷ ಅರ್ಜಿಗಳನ್ನು ಇತ್ಯರ್ಥಗೊಳಿಸಿದ ನ್ಯಾಯಮೂರ್ತಿಗಳಾದ ಎ.ಆರ್‌.ಮಸೋದಿ, ಬ್ರಿರಾಜ್‌ ಸಿಂಘ್‌ ಅವರ ಪೀಠವು ಈ ಕುರಿತು ತೀರ್ಪು ಪ್ರಕಟಿಸಿದೆ. ಅದರ ಪ್ರತಿಯನ್ನು ಶುಕ್ರವಾರ ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ಹೊಸ ಆಯ್ಕೆಪಟ್ಟಿ ಸಿದ್ಧಪಡಿಸುವಾಗ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಶಿಕ್ಷಕರಿಗೆ ಈ ಶೈಕ್ಷಣಿಕ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ದೊರೆಯುವಂತೆ ಎಚ್ಚರವಹಿಸಬೇಕು. ಈ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಪೀಠ ಹೇಳಿದೆ.

ಹಿಂದಿನ ಆದೇಶವನ್ನು ಪರಿಷ್ಕರಿಸಿರುವ ಪೀಠವು, ಸಾಮಾನ್ಯ ವರ್ಗದ ಮೆರಿಟ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಮೀಸಲು ಪ್ರವರ್ಗದ ಅಭ್ಯರ್ಥಿಗಳನ್ನು, ಸಾಮಾನ್ಯ ವರ್ಗಕ್ಕೆ ಸ್ಥಳಾಂತರಿಸಬೇಕು ಎಂದೂ ಪೀಠ ತಿಳಿಸಿದೆ. ಅಲ್ಲದೆ ಲಂಬ ಮೀಸಲಾತಿಯ ಅನುಕೂಲಗಳು ಸಮತಲ ಮೀಸಲಾತಿ ಪ್ರವರ್ಗಗಳಿಗೂ ವಿಸ್ತರಣೆಯಾಗಬೇಕು ಎಂದು ಪೀಠ ನಿರ್ದೇಶಿಸಿದೆ.

2022ರ ಜನವರಿ 5ರ 6,800 ಮೀಸಲು ಅಭ್ಯರ್ಥಿಗಳ ಆಯ್ಕೆಪಟ್ಟಿಯನ್ನು ರದ್ದು ಮಾಡಿದ್ದ ಏಕಸದಸ್ಯ ಪೀಠದ ತೀರ್ಪನ್ನು ಈ ಪೀಠವೂ ಎತ್ತಿ ಹಿಡಿದಿದೆ.

ಹೊಸ ಆಯ್ಕೆ ಪಟ್ಟಿಯನ್ನು ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಪ್ರಕಟಿಸುವಂತೆ ಪೀಠವು ರಾಜ್ಯ ಸರ್ಕಾರ ಮತ್ತು ಇತರ ಪ್ರಾಧಿಕಾರಗಳಿಗೆ ನಿರ್ದೇಶಿಸಿದೆ.

ರಾಜ್ಯದಲ್ಲಿ 69,000 ಶಿಕ್ಷಕರ ನೇಮಕಾತಿಯಲ್ಲಿ ಒದಗಿಸಿರುವ ಮೀಸಲಾತಿ ನಿಖರವಾಗಿಲ್ಲ ಎಂದು ವಾದಿಸಿದ್ದ ಮೇಲ್ಮನವಿದಾರರು, 6,800 ಶಿಕ್ಷಕರ ನೇಮಕಾತಿಯ ಸಿಂಧುತ್ವವನ್ನು ಪ್ರಶ್ನಿಸಿದ್ದರು.

ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಮೀಸಲಾತಿಯ ಲಾಭ ಪಡೆದ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಕಟ್‌-ಆಫ್‌ನಷ್ಟು ಅಂಕಗಳನ್ನು ಪಡೆದಿದ್ದರೂ ಅವರನ್ನು ಸಾಮಾನ್ಯ ವರ್ಗದ ಅಡಿ ಪರಿಗಣಿಸಬಾರದು ಎಂದು ಏಕ ಸದಸ್ಯ ಪೀಠ ತೀರ್ಪು ನೀಡಿತ್ತು.

ಈ ಕುರಿತು ಸ್ಪಷ್ಟಪಡಿಸಿರುವ ವಿಭಾಗೀಯ ಪೀಠ, ಅಭ್ಯರ್ಥಿಯ ಅಂಕಗಳು ಸಾಮಾನ್ಯ ವರ್ಗದ ಅರ್ಹತಾ ಮಾನದಂಡಗಳನ್ನು ಪೂರೈಸುವಂತಿದ್ದರೆ, ಅವರನ್ನು ಸಾಮಾನ್ಯ ವರ್ಗಕ್ಕೆ ಸ್ಥಳಾಂತರಿಸಬೇಕು ಎಂದು ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಸಹಾಯಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮೇಲೆ ಹೈಕೋರ್ಟ್‌ನ ಈ ತೀರ್ಪು ವ್ಯಾಪಕ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಯ ಪಿತೂರಿಗಳಿಗೆ ತಕ್ಕ ಉತ್ತರ: ರಾಹುಲ್‌ ಗಾಂಧಿ

ನವದೆಹಲಿ: ಉತ್ತರ ಪ್ರದೇಶದ 69000 ಸಹಾಯಕ ಶಿಕ್ಷಕರ ನೇಮಕಾತಿಗೆ ಹೊಸ ಆಯ್ಕೆಪಟ್ಟಿ ಸಿದ್ಧಪಡಿಸುವಂತೆ ಹೇಳಿರುವ ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಸ್ವಾಗತಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ 'ಮೀಸಲಾತಿ ವ್ಯವಸ್ಥೆ ಜತೆ ಆಟವಾಡುತ್ತಿರುವ ಬಿಜೆಪಿ ಸರ್ಕಾರದ ಪಿತೂರಿಗಳಿಗೆ ಈ ತೀರ್ಪು ತಕ್ಕ ಉತ್ತರ' ಎಂದು ಹೇಳಿದ್ದಾರೆ.

ಈ ಕುರಿತು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಅವರು 'ಇದು ಐದು ವರ್ಷಗಳಿಂದ ಚಳಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಬೀದಿಗಿಳಿದು ಹೋರಾಡುತ್ತಿರುವ ಅಮಿತ್‌ ಮೌರ್ಯ ಅವರಂತಹ ಸಹಸ್ರಾರು ಯುವ ಜನರ ಜತೆಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬರಿಗೂ ದೊರೆತ ವಿಜಯವಾಗಿದೆ' ಎಂದು ಬಣ್ಣಿಸಿದ್ದಾರೆ.

'ಮೀಸಲಾತಿಯನ್ನು ಕಿತ್ತುಕೊಳ್ಳುವ ಬಿಜೆಪಿಯ ಹಠಮಾರಿತನವು ಹಲವು ಅಮಾಯಕ ಅಭ್ಯರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದೆ' ಎಂದು ಅವರು ಕಿಡಿಕಾರಿದ್ದಾರೆ.

'ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಐದು ವರ್ಷಗಳ ಕಾಲ ಹೋರಾಡುವಂತೆ ಮಾಡಿದ್ದಕ್ಕೆ ಬಿಜೆಪಿಯನ್ನು ಶಪಿಸಬೇಕು. ಅಂತೆಯೇ ಬಿಜೆಪಿ ಕಾರಣದಿಂದಲೇ ಹಲವರು ಹೊಸ ಪಟ್ಟಿಯಿಂದ ಹೊರ ಹೋಗಲಿದ್ದಾರೆ' ಎಂದು ಅವರು ಟೀಕಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries