ಜರುಸಲೇಂ: ಹಮಾಸ್ ಬಂಡುಕೋರರು ಅಕ್ಟೋಬರ್ 7ರಂದು ದಾಳಿ ನಡೆಸಿದ್ದ ಸಂದರ್ಭದಲ್ಲಿ ಹೊತ್ತೊಯ್ದಿದ್ದ ಒತ್ತೆಯಾಳುಗಳ ಪೈಕಿ ಆರು ಮಂದಿಯ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಸ್ರೇಲ್ ಸೇನೆಯು ಮಂಗಳವಾರ ತಿಳಿಸಿದೆ.
ಜರುಸಲೇಂ: ಹಮಾಸ್ ಬಂಡುಕೋರರು ಅಕ್ಟೋಬರ್ 7ರಂದು ದಾಳಿ ನಡೆಸಿದ್ದ ಸಂದರ್ಭದಲ್ಲಿ ಹೊತ್ತೊಯ್ದಿದ್ದ ಒತ್ತೆಯಾಳುಗಳ ಪೈಕಿ ಆರು ಮಂದಿಯ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಸ್ರೇಲ್ ಸೇನೆಯು ಮಂಗಳವಾರ ತಿಳಿಸಿದೆ.
ಅಮೆರಿಕ ಮತ್ತು ಅರಬ್ ಮಧ್ಯವರ್ತಿಗಳು ಕದನ ವಿರಾಮ ಘೋಷಣೆ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಬರುವಂತೆ ಒತ್ತಾಯಿಸುತ್ತಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಸೇನೆಯು ದಕ್ಷಿಣ ಗಾಜಾದಲ್ಲಿ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಆರು ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಸ್ರೇಲ್ ತಿಳಿಸಿದೆ. ಆರು ಮಂದಿ ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಅದು ಮಾಹಿತಿ ನೀಡಿಲ್ಲ. ಒತ್ತೆಯಾಳುಗಳ ಕುಟುಂಬಸ್ಥರ ಸಂಘವು, 'ಜೀವಂತವಾಗಿ ಅವರನ್ನು ಅಪಹರಿಸಲಾಗಿತ್ತು' ಎಂದು ಹೇಳಿದೆ.
ಈ ಮಧ್ಯೆ ಹಮಾಸ್ ಬಂಡುಕೋರರು, 'ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕೆಲ ಒತ್ತೆಯಾಳುಗಳು ಮೃತಪಟ್ಟಿದ್ದಾರೆ. ಇನ್ನು ಕೆಲವರು ಗಾಯಗೊಂಡಿದ್ದಾರೆ' ಎಂದು ಹೇಳಿದೆ.
ಕದನ ವಿರಾಮ ಘೋಷಣೆ ಮತ್ತು ಒತ್ತೆಯಾಳುಗಳ ಪರಸ್ಪರ ವಿನಿಮಯದ ವಿಶ್ವಾಸ ಹೊಂದಿದ್ದ ಹಮಾಸ್ ಬಂಡುಕೋರರಿಗೆ ಈ ಘಟನೆಯು ಆಘಾತವನ್ನು ಉಂಟುಮಾಡಿದೆ. ಇನ್ನೊಂದೆಡೆ, ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿ ಒಪ್ಪಂದಕ್ಕೆ ಬರುವಂತೆ ಇಸ್ರೇಲ್ ಸರ್ಕಾರದ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆಯೂ ಇದೆ.
'ಜೀವಂತವಾಗಿರುವ ಮತ್ತು ಮೃತಪಟ್ಟ ಒತ್ತೆಯಾಳುಗಳನ್ನು ಮರಳಿ ಕರೆತರಲು ಎಲ್ಲಾ ರೀತಿಯ ಪ್ರಯತ್ನವನ್ನೂ ಇಸ್ರೇಲ್ ಮುಂದುವರಿಸಲಿದೆ' ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.