ತಿರುವನಂತಪುರ: ಓಣಂ ಹಬ್ಬದ ಪ್ರಯುಕ್ತ ರಾಜ್ಯದ 6 ಲಕ್ಷ ಬಡ ಕುಟುಂಬಗಳಿಗೆ ವಿಶೇಷ ಕಿಟ್‌ಗಳನ್ನು ವಿತರಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
ಈ ಕಿಟ್‌ನಲ್ಲಿ 13 ರೀತಿಯ ವಸ್ತುಗಳು ಮತ್ತು ಸಾಮಗ್ರಿಗಳು ಇರುತ್ತವೆ. ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿಯಲ್ಲಿ ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳಿಗೆ ಪಡಿತರ ಅಂಗಡಿಗಳ ಮೂಲಕ ಸುಮಾರು 5,90,000 ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಸಿಎಂ ಕಚೇರಿ ತಿಳಿಸಿದೆ.
ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಿಟ್ ವಿತರಣೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಕಿಟ್‌ಗಳ ವಿತರಣೆಗಾಗಿ ನಾಗರಿಕ ಸರಬರಾಜು ನಿಗಮಕ್ಕೆ ₹34,29 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಅಲ್ಲದೇ, ರಾಜ್ಯದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1,368 ಹೆಚ್ಚುವರಿ ಬೋಧಕ ಹುದ್ದೆಗಳ ನೇಮಕಕ್ಕೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.