ಢಾಕಾ: ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳ ಸಂಘಟನೆಗಳು ಕರೆ ನೀಡಿರುವ ಅಸಹಕಾರ ಚಳವಳಿಯ ಮೊದಲ ದಿನ ಭಾನುವಾರ ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವಿನ ಸಂಘರ್ಷ ಹಿಂಸಾರೂಪಕ್ಕೆ ತಿರುಗಿದ್ದು, 72 ಮಂದಿ ಮೃತಪಟ್ಟಿದ್ದಾರೆ.
ಢಾಕಾ: ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳ ಸಂಘಟನೆಗಳು ಕರೆ ನೀಡಿರುವ ಅಸಹಕಾರ ಚಳವಳಿಯ ಮೊದಲ ದಿನ ಭಾನುವಾರ ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವಿನ ಸಂಘರ್ಷ ಹಿಂಸಾರೂಪಕ್ಕೆ ತಿರುಗಿದ್ದು, 72 ಮಂದಿ ಮೃತಪಟ್ಟಿದ್ದಾರೆ.
ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಇಂದು ಬೆಳಿಗ್ಗೆ ಪ್ರತಿಭಟನಾಕಾರರು ಅಸಹಕಾರ ಚಳವಳಿ ಆರಂಭಿಸಿದ್ದರು. ಇದಕ್ಕೆ ಆಡಳಿತಾರೂಢ ಅವಾಮಿ ಲೀಗ್, ಛತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರಿಂದ ಸಂಘರ್ಷ ಭುಗಿಲೆದ್ದಿದೆ.
'ಸಂಘರ್ಷದಲ್ಲಿ ಬಾಂಗ್ಲಾದೇಶದ 13 ಜಿಲ್ಲೆಗಳಲ್ಲಿ ಈವರೆಗೆ 32 ಮಂದಿ ಮೃತಪಟ್ಟಿದ್ದಾರೆ'ಎಂದು ಪ್ರೊಥೊಮ್ ಅಲೊ ಪತ್ರಿಕೆ ವರದಿ ಮಾಡಿದೆ.
ಫೆನಿಯಲ್ಲಿ 5 ಮಂದಿ, ಮುಶಿಗಂಜ್, ಬೊಗುರಾ, ಮಗುರಾ, ಭೋಲಾ, ರಂಗಪುರದಲ್ಲಿ ತಲಾ ಮೂವರು ಮೃತಪಟ್ಟಿದ್ದಾರೆ. ಪಾಬ್ನಾ, ಸಿಲ್ಹಟ್‌ನಲ್ಲಿ ತಲಾ ಇಬ್ಬರು, ಕೊಮಿಲ್ಲ, ಜೋಯ್‌ಪುರ್‌ಹಟ್, ಢಾಕಾ ಮತ್ತು ಬಾರಿಸಾಲ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.
ಇಂದು ಸಂಜೆಯಿಂದ ದೇಶದಾದ್ಯಂತ ಅನಿರ್ದಿಷ್ಟಾವಧಿಗೆ ಕರ್ಫ್ಯೂ ವಿಧಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.
ಮೆಟಾದ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಮೆಸೆಂಜರ್, ವಾಟ್ಸ್‌ಆಯಪ್, ಇನ್‌ಸ್ಟಾಗ್ರಾಮ್ ಸ್ಥಗಿತಕ್ಕೆ ಸೂಚಿಸಲಾಗಿದೆ. 4ಜಿ ಇಂಟರ್‌ನೆಟ್ ಸ್ಥಗಿತಕ್ಕೂ ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ.
ಈ ನಡುವೆ ಸಂಘರ್ಷದ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ಶೇಖ್ ಹಸೀನಾ, ದೇಶದಾದ್ಯಂತ ಪ್ರತಿಭಟನೆ ನೆಪದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವವರು ವಿದ್ಯಾರ್ಥಿಗಳಲ್ಲ. ಭಯೋತ್ಪಾದಕರು. ಅಂತಹವರನ್ನು ನಿಗ್ರಹಿಸಿ ಎಂದು ಜನರಿಗೆ ಕರೆ ನೀಡಿದ್ದಾರೆ.
ಈ ನಡುವೆ ಪ್ರಧಾನಿ ಶೇಖ್ ಹಸೀನಾ, ಭದ್ರತಾ ವ್ಯವಹಾರಗಳ ಕುರಿತಾದ ರಾಷ್ಟ್ರೀಯ ಸಮಿತಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭೂಸೇನೆ, ವಾಯುಸೇನೆ, ನೌಕಾಪಡೆಯ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.