ಜೈಪುರ: ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಾಡಿ, ರೀಲ್ಸ್ ಮಾಡಲು ಹೋದ ಒಂದೇ ಹಳ್ಳಿಯ ಏಳು ಯುವಕರು ನೀರು ಪಾಲಾಗಿರುವ ಘಟನೆ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಭಾನುವಾರ ವರದಿಯಾಗಿದೆ.
ಶ್ರೀನಗರ ಎಂಬ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಉಕ್ಕಿ ಹರಿಯುತ್ತಿರುವ ಬಣಗಂಗಾ ನದಿಯಲ್ಲಿ ಯುವಕರು ಕೊಚ್ಚಿಹೋಗಿದ್ದಾರೆ.
ರಾಜಸ್ಥಾನದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಜೈಪುರದ ಕನೋತ ಅಣೆಕಟ್ಟಿನಲ್ಲಿ ಏಳು ಯುವಕರು ಮೃತಪಟ್ಟಿರುವ ಮತ್ತೊಂದು ಪ್ರಕರಣವೂ ಭಾನುವಾರ ಬೆಳಕಿಗೆ ಬಂದಿದೆ. ಆರು ಮಂದಿ ಈಜಲು ಹೋಗಿದ್ದರು. ಅದರಲ್ಲಿ ಐವರು ಬಲವಾದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ನಾಗರಿಕ ರಕ್ಷಣಾ ತಂಡಗಳು ಹುಡುಕು ಕಾರ್ಯಾಚರಣೆ ನಡೆಸುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಕೇಶ್ ಚೌಧರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಶನಿವಾರವೂ ಇಂಥ ಪ್ರಕರಣಗಳು ವರದಿಯಾಗಿದ್ದವು. ಝುಂಝುನು ಜಿಲ್ಲೆಯ ಮೆಹ್ರಾನ ಗ್ರಾಮದ ಮೂವರು ಯುವಕರು ತುಂಬಿದ್ದ ಕೊಳದಲ್ಲಿ ಈಜಲು ಹೋಗಿ ಮೃತಪಟ್ಟಿದ್ದರು. ಭಾರಿ ಮಳೆಯಿಂದಾಗಿ ಮನೆ ಕುಸಿದು ತಂದೆ ಮತ್ತು ಮಗ ಸಾವಿಗೀಡಾದ ಇನ್ನೊಂದು ಪ್ರಕರಣ ಕರೌಲಿ ಜಿಲ್ಲೆಯಲ್ಲಿ ಅದೇ ದಿನ ವರದಿಯಾಗಿತ್ತು. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ, ಕುಟುಂಬದ ಇನ್ನು ಮೂವರನ್ನು ರಕ್ಷಿಸಲಾಗಿದೆ. ಭಾರಿ ಮಳೆಗೆ ಸಾಕ್ಷಿಯಾಗಿರುವ ಕರೌಲಿಯಲ್ಲಿ ಮತ್ತೊಬ್ಬ ಯುವಕ ಕೊಳದಲ್ಲಿ ಮುಳುಗಿ ಸಾವಿಗೀಡಾಗಿದ್ದ.
ಜೋಧಪುರ ಜಿಲ್ಲೆಯಲ್ಲೂ ಸತತವಾಗಿ ಮಳೆ ಸುರಿಯುತ್ತಿದೆ. ಇಲ್ಲಿನ ಒಸಿಯಾನ್ ಪಟ್ಟಣದ ಭಿಕ್ಮಾಕೊರ್ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟು ಕುಸಿದು, ಏಕಾಏಕಿ ನುಗ್ಗಿದ ನೀರಿನಲ್ಲಿ ಟ್ರಾಕ್ಟರ್ ಕೊಚ್ಚಿಹೋಗಿದೆ.
ಜೈಪುರ ಜಿಲ್ಲೆಯಲ್ಲಿ ಈ ಋತುವಿನಲ್ಲಿ 50.17 ಮಿ.ಮಿ. ಮಳೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಶೇ 50ಕ್ಕಿಂತ ಅಧಿಕ ಪ್ರಮಾಣವಾಗಿದೆ. ಹೀಗಾಗಿ, ರಾಜಧಾನಿಯಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಪ್ರದೇಶಗಳು ಜಲಾವೃತವಾಗಿದ್ದು, ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ.
ಹವಾಮಾನ ಇಲಾಖೆಯು ಜೈಪುರ, ಭರತ್‌ಪುರ, ಕರೌಲಿ, ಶ್ರೀಗಂಗನಗರ, ಹನುಮನಗರ, ಟೊಂಕ್, ಬಿಕನೇರ್, ಝುಂಝುನು ಮತ್ತು ದೌಸಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.