ನವದೆಹಲಿ: ಮೊಸಳೆ ಎಂಬ ಪದ ಕೇಳಿದರೆ ಸಾಕು ಎಲ್ಲರ ಕೈ-ಕಾಲು ನಡುಗುತ್ತದೆ. ಬಹುಶಃ ಆಸ್ಟ್ರೇಲಿಯನ್ ಝೂಕೀಪರ್ ದಿವಂಗತ ಸ್ಟೀವ್ ಇರ್ವಿನ್ ಮಾತ್ರ ಮೊಸಳೆ ಪದ ಕೇಳಿದರೆ ಎಲ್ಲಿಲ್ಲದ ಉತ್ಸಾಹ ಬರುತ್ತಿತ್ತು. ಮೊಸಳೆಯ ಹರಿತವಾದ ಹಲ್ಲು, ದೊಡ್ಡ ದವಡೆ ಮತ್ತು ತೀವ್ರ ನೋಟ ಸಾಕು ಯಾವುದೇ ವ್ಯಕ್ತಿ ಭಯ ಬೀಳಲು, ಅಂತಹುದರಲ್ಲಿ ಮೊಸಳೆ ಏನಾದರೂ ತುಂಬಾ ಹತ್ತಿರಕ್ಕೆ ಬಂದಲ್ಲಿ ಆ ವ್ಯಕ್ತಿ ಭಯದಲೇ ಹೆಪ್ಪುಗಟ್ಟಿಬಿಡುತ್ತಾನೆ.
ಬೇಟೆಗೆ ಇಳಿದರೆ ಸಾಕು ಮೊಸಳೆ ಯಾವುದನ್ನು ಬಿಡುವುದಿಲ್ಲ. ಅದು ದೊಡ್ಡ ಪ್ರಾಣಿಯಾದರೂ ಸರಿ ನುಂಗಿ ನೀರು ಕುಡಿಯುತ್ತದೆ. ನೀರಿನಲ್ಲಿ ಸಿಗುವ ವಿವಿಧ ಜಾತಿಯ ಮೀನುಗಳು ಮೊಸಳೆಗೆ ಸುಲಭ ಆಹಾರವಾಗುತ್ತವೆ. ತುಂಬಾ ಅಪಾಯಕಾರಿ ಎನಿಸಿಕೊಳ್ಳುವ ಮೊಸಳೆಯೇ ಕೆಲವೊಮ್ಮೆ ಬೇಟೆಯಾಗಿಬಿಡುತ್ತವೆ. ಇಂಥಾ ಎಷ್ಟೋ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಅದೇ ರೀತಿ ಇದೀಗ ಮೊಸಳೆ, ಮೀನನ್ನು ಬೇಟೆಯಾಡಲು ಹೋಗಿ ತಾನೇ ಬಲಿಯಾಗಿದೆ.
ನಿಮಗೆ ಈಲ್ಸ್ ಮೀನಿನ ಬಗ್ಗೆ ಗೊತ್ತಿರಬಹುದು. ಮೀನು ಜಾತಿಗಳಲ್ಲಿ ಇದು ಅತ್ಯಂತ ಅಪಾಯಕಾರಿ ಮೀನು. ಈ ಈಲ್ಸ್ ಜಾತಿಗಳಲ್ಲಿ ಎಲೆಕ್ಟ್ರಿಕ್ ಈಲ್ಸ್ ತುಂಬಾ ಡೇಂಜರ್. ಏಕೆಂದರೆ ಇದು ವಿದ್ಯುತ್ ಉತ್ಪಾದಿಸುತ್ತದೆ. ಬರೋಬ್ಬರಿ 860 ವೋಲ್ಟ್‌ಗಳವರೆಗೆ ವಿದ್ಯುತ್ ಶಾಕ್ ನೀಡುವ ಮೂಲಕ ತಮ್ಮ ಬೇಟೆಯನ್ನು ಸಾಯಿಸುತ್ತದೆ. ಅಲ್ಲದೆ, ತನಗೆ ಕಂಟಕ ಎದುರಾದಾಗಲೂ ಈ ಈಲ್ಸ್ ತನ್ನ ರಕ್ಷಣೆಗೆಂದು ಈ ವಿದ್ಯುತ್ ಪವರ್ ಅನ್ನು ಬಳಸಿಕೊಳ್ಳುತ್ತದೆ.
ಇದೀಗ ಮೊಸಳೆ ಮತ್ತು ಎಲೆಕ್ಟ್ರಿಕ್ ಈಲ್ ನಡುವಿನ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನದಿಯ ದಡದಲ್ಲಿ ಮೊಸಳೆ ಇದೆ. ಅದರ ಸನಿಹಕ್ಕೆ ಈಲ್ ಮೀನೊಂದು ಬಂದಿತು. ಈಲ್ ದಡಕ್ಕೆ ಬರುತ್ತಿದ್ದಂತೆ ಮೊಸಳೆ ದಾಳಿ ಮಾಡಿ ತನ್ನ ದವಡೆಯಲ್ಲಿ ಹಿಡಿದುಕೊಳ್ಳುತ್ತದೆ. ಆನಂತರ ನಡೆದಿದ್ದು ಮಾತ್ರ ಬೆಚ್ಚಿಬೀಳಿಸುವ ದೃಶ್ಯ.
ಮೊಸಳೆ ಹಿಡಿತಕ್ಕೆ ಸಿಲುಕಿದ ಈಲ್ ತನ್ನ ರಕ್ಷಣೆಗಾಗಿ ತನ್ನ ದೇಹದಲ್ಲಿರುವ 860 ವೋಲ್ಟ್ ಅನ್ನು ತಕ್ಷಣ ಬಿಡುಗಡೆ ಮಾಡುತ್ತದೆ. ಇದರಿಂದ ಕರೆಂಟ್ ಶಾಕ್ಗೆ ಸಿಲುಕಿದ ಮೊಸಳೆ, ಸ್ವಲ್ಪ ಸಮಯದವರೆಗೂ ನೀರಿನಲ್ಲೇ ಒದ್ದಾಡಿ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಇತ್ತ ಮೊಸಳೆಯ ದವಡೆಗೆ ಸಿಲುಕಿದ ಈಲ್ ಕೂಡ ಸತ್ತುಹೋಯಿತು. ಇದನ್ನೆಲ್ಲ ವ್ಯಕ್ತಿಯೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಂದಹಾಗೆ ಎಲೆಕ್ಟ್ರಿಕ್ ಈಲ್ ಒಂದು ಪ್ರಾಣಾಂತಿಕ ಮೀನು. ಇದು 860 ವೋಲ್ಟ್ ವಿದ್ಯುತ್ ಉತ್ಪಾದಿಸಬಹುದು. ಈ ಮೀನು ಹಿಡಿಯಲು ಹೋದ ಹಲವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಅಲ್ಲದೆ, ಅನೇಕರು ಗಂಭೀರವಾಗಿ ಗಾಯಗೊಂಡು ಹಾಸಿಗೆಗೆ ಸೀಮಿತರಾಗಿದ್ದಾರೆ.