ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ರಾಜ್ಯದ ವಿವಿಧೆಡೆಗಳ್ಲಿ 87 ರಸ್ತೆಗಳ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ರಾಜ್ಯದ ತುರ್ತು ಕಾರ್ಯಾಚರಣಾ ಕೇಂದ್ರ ತಿಳಿಸಿದೆ.
ಗುರುವಾರದವರೆಗೆ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಕೇಂದ್ರವು ಯೆಲ್ಲೊ ಅಲರ್ಟ್ ಘೋಷಿಸಿದೆ.
ಸುಮಾರು ಒಂದು ವಾರದಿಂದ ಬೀಳುತ್ತಿರುವ ಭಾರಿ ಮಳೆಯಿಂದ ಹಿಮಾಚಲ ಪ್ರದೇಶ ತತ್ತರಿಸಿದೆ. ಕುಲ್ಲು, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಜುಲೈ 31ರಂದು ಸಂಭವಿಸಿರುವ ಮೇಘಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹದಲ್ಲಿ 13 ಮಂದಿ ಮೃತಪಟ್ಟು, 40 ಮಂದಿ ನಾಪತ್ತೆಯಾಗಿದ್ದಾರೆ.
ಕುಲ್ಲುವಿನಲ್ಲಿ 30, ಮಂಡಿಯಲ್ಲಿ 25, ಲಾಹೌಲ್ ಮತ್ತು ಸ್ಪಿತಿಯಲ್ಲಿ 14, ಶಿಮ್ಲಾದಲ್ಲಿ 9, ಕಾಂಗ್ರಾದಲ್ಲಿ 7 ಹಾಗೂ ಕಿನ್ನೌರ್‌ನಲ್ಲಿ ಎರಡು ರಸ್ತೆಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಧಂಧಾಲ್ ನುಲ್ಲಾಹ್‌ನಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಲಾಹೌಲ್ ಮತ್ತು ಸ್ಪಿತಿಯ ಉದಯಪುರ ಉಪ ವಿಭಾಗದ ಸಂನ್ಸಾರಿ-ಕಿಲ್ಲರ್-ತಿರೋಟ್-ತಂಡಿ(ಎಸ್‌ಕೆಟಿಟಿ) ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಚಂದ್ರಭಾಗ ನದಿಯ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ನೆರೆಪೀಡಿತ ಹಳ್ಳಿಗಳ ಜನರಿಗೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ.
ಹಮೀರ್‌ಪುರದಲ್ಲಿ ಭಾನುವಾರದ ಸಂಜೆಯಿಂದ 67 ಮಿ.ಮೀ ಮಳೆಯಾಗಿದೆ. ಅಘರ್‌ನಲ್ಲಿ 44 ಮಿ.ಮೀ, ನದೌನ್‌ನಲ್ಲಿ 38 ಮಿ.ಮೀ, ದೆಹ್ರಾ ಗೋಪಿಪುರದಲ್ಲಿ 32.3 ಮಿ.ಮೀ ಮತ್ತು ಪಲಂಪುರದಲ್ಲಿ 28 ಮಿ.ಮೀ ಮತ್ತು
ದೌಲಾ ಕೌನ್‌ನಲ್ಲಿ 27.5 ಮಿ.ಮೀ ಮಳೆಯಾಗಿದೆ.
ಆಗಸ್ಟ್ 8ರವರೆಗೆ ರಾಜ್ಯದ ಹಲವೆಡೆ ಯೆಲ್ಲೊ ಅಲರ್ಟ್ ಘೋಷಿಸಿರುವ ಹವಾಮಾನ ಕೇಂದ್ರವು, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸುವ ಬಗ್ಗೆಯೂ ಎಚ್ಚರಿಕೆ ನೀಡಿದೆ.
ಜೂನ್ 27ರಿಂದ ಆಗಸ್ಟ್ 4ರವರೆಗೆ ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 79 ಮಂದಿ ಮೃತಪಟ್ಟಿದ್ದಾರೆ.