ವಾಷಿಂಗ್ಟನ್: ಸುಮಾರು 3,000 ಜನರನ್ನು ಬಲಿಪಡೆದ 2001ರಲ್ಲಿ ನಡೆದ 9/11ರ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಖಾಲಿದ್ ಶೇಖ್ ಮೊಹಮ್ಮದ್ ಮತ್ತು ಈತನ ಸಹಚರರಾದ ಕುವೈತಿ- ಪಾಕಿಸ್ತಾನಿ ಎಂಜಿನಿಯರ್ ಮತ್ತು ಇತರ ಇಬ್ಬರು ಆರೋಪಿಗಳೊಂದಿಗೆ ವಿಚಾರಣಾಪೂರ್ವ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಅಮೆರಿಕ ಘೋಷಿಸಿದೆ.
27 ತಿಂಗಳ ಮಾತುಕತೆಯ ಬಳಿಕ ಈ ಒಪ್ಪಂದ ಏರ್ಪಟ್ಟಿದೆ. ಇದರ ಪ್ರಕಾರ ಮೊಹಮ್ಮದ್ ಮತ್ತು ಇತರ ಆರೋಪಿಗಳಾದ ವಾಲಿದ್ ಬಿನ್, ಅತ್ತಾಶ್ ಮತ್ತು ಮುಸ್ತಫಾ ಹವ್ಸಾವಿ ಎಂಬುವವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಹಿಂಪಡೆಯಲಾಗುವುದು ಎಂದು ಬುಧವಾರ ರಕ್ಷಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲಾ ಆರೋಪಿಗಳು ಕಳೆದ 2 ದಶಕಗಳಿಂದ ಕ್ಯೂಬಾದ ಗ್ವಾಂಟನಮೊದಲ್ಲಿರುವ ಅಮೆರಿಕ ಸೇನೆಯ ಜೈಲಿನಲ್ಲಿದ್ದಾರೆ. ಆರೋಪಿಗಳು ಸಲ್ಲಿಸಿರುವ ತಪ್ಪೊಪ್ಪಿಗೆ ಅರ್ಜಿಯ ವಿಚಾರಣೆಯು ಮುಂದಿನ ವಾರದಿಂದ ಆರಂಭವಾಗಲಿದೆ.
2001ರ ಸೆಪ್ಟೆಂಬರ್ 11ರಂದು ಭಯೋತ್ಪಾದಕರಿಂದ ಅಪಹರಿಸಲಾದ ಎರಡು ಪ್ರಯಾಣಿಕ ವಿಮಾನಗಳು ನ್ಯೂಯಾರ್ಕ್ ನಗರದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳಿಗೆ ಡಿಕ್ಕಿ ಹೊಡೆದವು. ಮೂರನೇ ವಿಮಾನವು ವಾಷಿಂಗ್ಟನ್‌ನಲ್ಲಿರುವ ಪೆಂಟಗನ್‌ಗೆ ಅಪ್ಪಳಿಸಿತು. ನಾಲ್ಕನೇ ವಿಮಾನದಲ್ಲಿದ್ದ ಪ್ರಯಾಣಿಕರು ಅಪಹರಣಕಾರರೊಂದಿಗೆ ಹೋರಾಡಿದ್ದರಿಂದ ಅದು ಪೆನ್ಸಿಲ್ವೇನಿಯಾದಲ್ಲಿ ಪತನಗೊಂಡಿತು.