ಜೆರುಸಲೇಂ: ಆಕ್ರಮಿತ ವೆಸ್ಟ್‌ಬ್ಯಾಂಕ್ ಪ್ರದೇಶದಲ್ಲಿ ಇಸ್ರೇಲ್ ಬುಧವಾರ ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, 9 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ.
' ಇಸ್ರೇಲ್ ಸೇನಾ ಪಡೆಯೊಂದಿಗೆ ಗುಂಡಿನ ಚಕಮಕಿ ನಡೆದಿರುವುದಾಗಿ' ಪ್ಯಾಲೆಸ್ಟೀನ್ ಬಂಡುಕೋರ ಸಂಘಟನೆ ತಿಳಿಸಿದೆ.
'ಜೆನಿನ್ ನಗರವನ್ನು ಇಸ್ರೇಲ್ ಪಡೆಗಳು ಸುತ್ತುವರಿದಿವೆ. ನಗರದ ನಿರ್ಗಮನ ಮತ್ತು ಪ್ರವೇಶ ದಾರಿಗಳು ಮುಚ್ಚಿದ್ದು, ಆಸ್ಪತ್ರೆಗಳಿಗೂ ಪ್ರವೇಶಿಸಲೂ ಸಾಧ್ಯವಾಗುತ್ತಿಲ್ಲ. ನಿರಾಶ್ರಿತರ ಶಿಬಿರಗಳು ಹಾನಿಗೊಂಡಿವೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ಜೆನಿನ್ ನಗರದೊಳಗೆ ಸೇನಾ ಪಡೆಗಳು ನುಗ್ಗಿವೆ. ವೈಮಾನಿಕ ದಾಳಿಯಿಂದಾಗಿ ತುಲ್ಕರೆಮ್‌ನಲ್ಲಿ 3 ಜನ ಮತ್ತು ಅಲ್-ಫರಾದಲ್ಲಿ ನಾಲ್ಕು ಜನ ಸೇರಿದಂತೆ ಒಟ್ಟು 9 ಮಂದಿ ಬಂಡುಕೋರರು ಮೃತಪಟ್ಟಿದ್ದಾರೆ. ಇತರ 5 ಮಂದಿ ಶಂಕಿತ ಬಂಡುಕೋರರನ್ನು ಬಂಧಿಸಲಾಗಿದೆ' ಎಂದು ಇಸ್ರೇಲ್‌ನ ಲೆಫ್ಟಿನೆಂಟ್ ಕೊಲೊನೆಲ್ ನಡಾವ್ ಶೋಶಾನಿ ಅವರು ತಿಳಿಸಿದ್ದಾರೆ.
'ಇದು ಮೊದಲನೇ ಹಂತದ ದಾಳಿಯಾಗಿದ್ದು, ಇಸ್ರೇಲ್ ನಾಗರಿಕರ ಮೇಲಿನ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಇನ್ನೂ ಬೃಹತ್ ಪ್ರಮಾಣದ ದಾಳಿ ನಡೆಸುವ ಯೋಜನೆಯಿದೆ' ಎಂದು ಹೇಳಿದ್ದಾರೆ.
ವೆಸ್ಟ್ ಬ್ಯಾಂಕ್ ಅನ್ನು ಗಾಜಾದೊಂದಿಗೆ ಹೋಲಿಕೆ ಮಾಡಿದ ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಟ್ಜ್ ಅವರು, 'ವೆಸ್ಟ್ ಬ್ಯಾಂಕ್‌ನಲ್ಲೂ ಗಾಜಾದ ರೀತಿ ದಾಳಿ ನಡೆಸುವಂತೆ ಸೂಚಿಸಿದ್ದಾರೆ.
'ಗಾಜಾದಲ್ಲಿನ ಭಯೋತ್ಪಾದನೆಯ ನಿಯಂತ್ರಣಕ್ಕಾಗಿ, ಪ್ಯಾಲೆಸ್ಟೀನಿಯರ ಸ್ಥಳಾಂತರ ಸೇರಿದಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು' ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
'ಗಾಜಾದಲ್ಲಿ ಯುದ್ಧ ಆರಂಭವಾದ ಬಳಿಕ ಇಸ್ರೇಲ್ ದಾಳಿಯಿಂದಾಗಿ ವೆಸ್ಟ್‌ಬ್ಯಾಂಕ್‌ನಲ್ಲಿ ಕನಿಷ್ಠ 652 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ' ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.