ಸಾಗರ : ಮಧ್ಯಪ್ರದೇಶದಲ್ಲಿ ಮನೆಯೊಂದರ ಗೋಡೆ ಕುಸಿದು 9 ಮಕ್ಕಳು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಜಿಲ್ಲಾಧಿಕಾರಿ ದೀಪಕ್ ಆರ್ಯ, ಎಸ್‌ಪಿ ಮತ್ತು ಉಪವಿಭಾಗಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಭಾನುವಾರ ರಾತ್ರಿಯೇ ಈ ಶಿಸ್ತುಕ್ರಮ ಜರುಗಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಸಿಎಂ ಪೋಸ್ಟ್ ಹಂಚಿಕೊಂಡಿದ್ದು ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದ ₹ 4 ಲಕ್ಷ ಪರಿಹಾರದ ಜೊತೆಗೆ PMNRF ಅಡಿಯಲ್ಲಿ ₹2 ಲಕ್ಷ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದೇ ರೀತಿಯ ಘಟನೆ ಶುಕ್ರವಾರ ರೇವಾ ಜಿಲ್ಲೆಯಲ್ಲಿ ನಡೆದಿತ್ತು. ಗೋಡೆ ಕುಸಿದು ನಾಲ್ವರು ಮಕ್ಕಳು ಹಾಗೂ ಒಬ್ಬ ಮಹಿಳೆ ಮೃತಪಟ್ಟಿದ್ದರು.
ಭಾನುವಾರ ಸಾಗರ ಜಿಲ್ಲೆಯ ರಹಲಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಶಾಹಪುರ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿದ್ದ ಸಂದರ್ಭದಲ್ಲಿ ದೇವಸ್ಥಾನದ ಆವರಣದ ಸನಿಹದಲ್ಲಿ ಬೆಳಿಗ್ಗೆ 8.30ರಿಂದ 9ರ ನಡುವೆ ದುರ್ಘಟನೆ ಸಂಭವಿಸಿತ್ತು.
ಮೃತ ಮಕ್ಕಳೆಲ್ಲ 8ರಿಂದ 15 ವರ್ಷದ ನಡುವಿನವರು. ಗೋಡೆ ಕುಸಿದಿದ್ದರಿಂದ ಇಬ್ಬರಿಗೆ ಗಾಯಗಳಾಗಿವೆ ಎಂದು ಸಾಗರ ವಿಭಾಗೀಯ ಆಯುಕ್ತ ವೀರೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ.
'ಪಾರ್ಥಿವ ಶಿವಲಿಂಗ ನಿರ್ಮಾಣ' ಕಾರ್ಯಕ್ರಮವು ಶಿಥಿಲಗೊಂಡಿದ್ದ ಮನೆಯ ಸನಿಹದಲ್ಲಿ ಡೇರೆಯೊಂದರಲ್ಲಿ ನಡೆಯುತ್ತಿತ್ತು. ಆಗ ಗೋಡೆ ಕುಸಿದು, ಡೇರೆಯ ಮೇಲೆ ಉರುಳಿತು ಎಂದು ಸ್ಥಳೀಯ ಶಾಸಕ, ಬಿಜೆಪಿಯ ಗೋಪಾಲ್ ಭಾರ್ಗವ ಅವರು ಸುದ್ದಿಗಾರರಿಗೆ ತಿಳಿಸಿದರು. ಮಕ್ಕಳು ಗೋಡೆಯ ಅಡಿಯಲ್ಲಿ ಸಿಲುಕಿ ಮೃತಪಟ್ಟರು.
ಮಕ್ಕಳು ಡೇರೆಯ ಅಡಿಯಲ್ಲಿ ಕುಳಿತಿದ್ದರು. ಮಳೆಯ ಕಾರಣದಿಂದಾಗಿ ಗೋಡೆ ಕುಸಿದಿದೆ ಎಂದು ಜಿಲ್ಲಾಧಿಕಾರಿ ದೀಪಕ್ ಆರ್ಯ ಮಾಹಿತಿ ನೀಡಿದ್ದಾರೆ. ಶಿವಲಿಂಗ ನಿರ್ಮಿಸುವ ಹಾಗೂ ಭಾಗವತದ ಕಥೆ ಪಠಿಸುವ ಚಟುವಟಿಕೆಯಲ್ಲಿ ಮಕ್ಕಳು ತೊಡಗಿಸಿಕೊಂಡಿದ್ದರು. ಭಾನುವಾರ ರಜೆ ಇದ್ದ ಕಾರಣ ಮಕ್ಕಳು ಹೆಚ್ಚಿನವರು ಪಾಲ್ಗೊಂಡಿದ್ದರು ಎನ್ನಲಾಗಿದೆ.
ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತ ಪಟ್ಟರು. ಏಳು ಮಂದಿ ಆಸ್ಪತ್ರೆಗೆ ಸಾಗಿಸು ವಾಗ ಮೃತಪಟ್ಟರು. ಗಾಯಗೊಂಡಿ ರುವ ಇಬ್ಬರು ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆರ್ಯ ಹೇಳಿದ್ದಾರೆ.