ನವದೆಹಲಿ: ದೇಶದ ವೈಮಾನಿಕ ಸಂಚಾರ ನಿಯಂತ್ರಣ ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ( ಡಿಜಿಸಿಎ) ಅರ್ಹರಲ್ಲದ ಸಿಬ್ಬಂದಿಯೊಂದಿಗೆ ವಿಮಾನಗಳ ಹಾರಾಟ ನಡೆಸಿದ್ದಕ್ಕಾಗಿ ಏರ್ ಇಂಡಿಯಾಗೆ ₹90 ಲಕ್ಷ ದಂಡ ವಿಧಿಸಿದೆ.
ನವದೆಹಲಿ: ದೇಶದ ವೈಮಾನಿಕ ಸಂಚಾರ ನಿಯಂತ್ರಣ ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ( ಡಿಜಿಸಿಎ) ಅರ್ಹರಲ್ಲದ ಸಿಬ್ಬಂದಿಯೊಂದಿಗೆ ವಿಮಾನಗಳ ಹಾರಾಟ ನಡೆಸಿದ್ದಕ್ಕಾಗಿ ಏರ್ ಇಂಡಿಯಾಗೆ ₹90 ಲಕ್ಷ ದಂಡ ವಿಧಿಸಿದೆ.
ಈ ಲೋಪಕ್ಕಾಗಿ ಏರ್ ಇಂಡಿಯಾದ ವಿಮಾನಗಳ ಕಾರ್ಯಾಚರಣೆಯ ನಿರ್ದೆಶಕರು ಮತ್ತು ತರಬೇತಿ ನಿರ್ದೇಶಕರಿಗೆ ಕ್ರಮವಾಗಿ ₹6 ಲಕ್ಷ ಮತ್ತು ₹3 ಲಕ್ಷ ದಂಡ ವಿಧಿಸಿದೆ.
ಅರ್ಹರಲ್ಲದ ಸಿಬ್ಬಂದಿ ಸೇರಿದಂತೆ ಈ ರೀತಿಯ ಅವ್ಯವಸ್ಥೆ ಮತ್ತೆ ತಲೆದೋರದಂತೆ ಎಚ್ಚರವಹಿಸುವಂತೆಯೂ ಡಿಜಿಸಿಎ ಎಚ್ಚರಿಕೆ ನೀಡಿದೆ.
'ನಾನ್ ಟ್ರೇನರ್ ಲೈನ್ ಕ್ಯಾಪ್ಟನ್ ನೇತೃತ್ವದಲ್ಲಿ ಏರ್ ಇಂಡಿಯಾ ಲಿಮಿಟೆಡ್ ವಿಮಾನಗಳನ್ನು ನಿರ್ವಹಿಸಿದೆ. ಇದು ಗಮನಾರ್ಹವಾದ ಸುರಕ್ಷತಾ ಪರಿಣಾಮಗಳನ್ನು ಹೊಂದಿರುವ ಗಂಭೀರ ಘಟನೆಯಾಗಿದೆ ಎಂದು ಪರಿಶೀಲನೆ ವೇಳೆ ಕಂಡುಬಂದಿದೆ'ಎಂದು ಅದು ತಿಳಿಸಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಜುಲೈ 10ರಂದೇ ಏರ್ ಇಂಡಿಯಾ ಸ್ವಯಂಪ್ರೇರಣೆಯಿಂದ ವರದಿ ನೀಡಿದೆ. ಈ ಬಗ್ಗೆ ಡಿಜಿಸಿಎ ತನಿಖೆ ನಡೆಸಿದೆ. ಸ್ಥಳ ಪರಿಶೀಲನೆ ಮತ್ತು ದಾಖಲೆಗಳ ಪರಿಶೀಲನೆ ಬಳಿಕ ಲೋಪ ಪತ್ತೆಯಾಗಿದೆ ಎಂದು ಅದು ಪ್ರಕಟಣೆ ತಿಳಿಸಿದೆ.
'ತನಿಖೆ ವೇಳೆ ವಿಮಾನಯಾನ ಸಂಸ್ಥೆಯ ಉನ್ನತಾಧಿಕಾರಿಗಳು, ಸಿಬ್ಬಂದಿ ಸುರಕ್ಷತೆಗೆ ಧಕ್ಕೆಯಾಗುವಂತಹ ಹಲವು ನಿಯಮಗಳ ಉಲ್ಲಂಘನೆ ಮತ್ತು ಲೋಪ ಎಸಗಿರುವುದು ಕಂಡುಬಂದಿದೆ'ಎಂದು ಪ್ರಕಟಣೆ ತಿಳಿಸಿದೆ.
ಅಲ್ಲದೆ, ಏರ್ ಇಂಡಿಯಾ ವಿಮಾನಗಳ ನಿಯಂತ್ರಕರು ಮತ್ತು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಅಧಿಕಾರಿಗಳಿಗೆ ಜುಲೈ 22ರಂದು ಶೋಕಾಸ್ ನೋಟಿಸ್ ನೀಡಿ ಲೋಪ ಕುರಿತಂತೆ ವಿವರಿಸಲು ಅವಕಾಶ ನೀಡಲಾಗಿತ್ತು. ಅವರು ನೀಡಿದ ಪ್ರತಿಕ್ರಿಯೆಯು ತೃಪ್ತಿಕರವಾಗಿರಲಿಲ್ಲ ಎಂದೂ ಡಿಜಿಸಿಎ ಹೇಳಿದೆ.