ಢಾಕಾ: ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನವಾದ ನಂತರ, ದೇಶದ 52 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಕನಿಷ್ಠ 205 ದಾಳಿಗಳು ನಡೆದಿವೆ ಎಂದು ಎರಡು ಹಿಂದೂ ಸಂಘಟನೆಗಳು ಹೇಳಿವೆ.
ಈ ಕುರಿತು, ಬಾಂಗ್ಲಾದೇಶ ಹಿಂದೂ, ಬುದ್ಧಿಸ್ಟ್ ಕ್ರಿಶ್ಚಿಯನ್ ಯುನಿಟಿ ಕೌನ್ಸಿಲ್ ಹಾಗೂ ಬಾಂಗ್ಲಾದೇಶ ಪೂಜಾ ಉದ್ಯಾಪನ ಪರಿಷತ್ ಎಂಬ ಸಂಘಟನೆಗಳು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿವೆ.
'ನಾವು ವಿಪತ್ತಿನಲ್ಲಿದ್ದು, ರಕ್ಷಣೆ ನೀಡಬೇಕು. ರಾತ್ರಿ ನಿದ್ದೆ ಮಾಡದೇ, ನಮ್ಮ ಮನೆಗಳು ಹಾಗೂ ದೇವಸ್ಥಾನಗಳನ್ನು ರಕ್ಷಣೆ ಮಾಡುತ್ತಿದ್ದೇವೆ. ನನ್ನ ಜೀವಮಾನದಲ್ಲಿಯೇ ಇಂತಹ ಪರಿಸ್ಥಿತಿ ನೋಡಿರಲಿಲ್ಲ. ಕೂಡಲೇ ದೇಶದಲ್ಲಿ ಕೋಮು ಸೌಹಾರ್ದ ಮರುಸ್ಥಾಪಿಸಬೇಕು' ಎಂದು ಕೌನ್ಸಿಲ್‌ನ ಅಧ್ಯಕ್ಷರಲ್ಲೊಬ್ಬರಾದ ನಿರ್ಮಲ್ ರೊಸಾರಿಯೊ ಹೇಳಿದ್ದಾರೆ.
ಸಂಘಟನೆಗಳ ಮುಖಂಡರಾದ ರಾಣಾ ದಾಸಗುಪ್ತ, ಬಸುದೇವ ಧರ್, ಕಾಜಲ್ ದೇವನಾಥ್ ಮತ್ತಿತರರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ವಿದ್ಯಾರ್ಥಿ ಮುಖಂಡ ಅಬು ಅನುಕರಿಸಿ: ಯೂನಸ್
ಢಾಕಾ(ಪಿಟಿಐ): 'ವಿದ್ಯಾರ್ಥಿ ಹೋರಾಟಗಾರ ಅಬು ಸಯೇದ್ ಅವರ ದಿಟ್ಟತನ ಎಲ್ಲರಿಗೂ ಮಾದರಿ. ಸರ್ಕಾರವನ್ನೇ ಉರುಳಿಸಿದ ಹೋರಾಟದ ವೇಳೆ ಅಬು ತೋರಿದ ಸ್ಥೈರ್ಯವನ್ನು ಎಲ್ಲರೂ ಅನುಕರಣೆ ಮಾಡಬೇಕು' ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಶನಿವಾರ ಹೇಳಿದರು. ಹೋರಾಟದ ವೇಳೆ ಜುಲೈ 16ರಂದು ಪೊಲೀಸರ ಗುಂಡಿಗೆ ಬಲಿಯಾದ ಮೊದಲ ವ್ಯಕ್ತಿ ಅಬು ಸಯೇದ್. 25 ವರ್ಷದ ಅಬು ರಂಗಪುರದ ಬೇಗಂ ರಕೆಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರು. ರಂಗಪುರದ ಪೀರಗಂಜ್‌ನಲ್ಲಿರುವ ಅಬು ಅವರ ನಿವಾಸಕ್ಕೆ ಭೇಟಿ ಅವರ ಕುಟುಂಸ್ಥರಿಗೆ ಸಾಂತ್ವನ ಹೇಳಿದ ನಂತರ ಅವರು ಮಾತನಾಡಿದರು. 'ನಾವೆಲ್ಲರೂ ಅಬು ಕುಟುಂಬದೊಂದಿಗೆ ನಿಲ್ಲಬೇಕಿದೆ. ಅವರ ಕುಟುಂಸ್ಥರನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ' ಎಂದರು.
ಬಾಂಗ್ಲಾದೇಶ ಬ್ಯಾಂಕ್ ಗವರ್ನರ್ ರಾಜೀನಾಮೆ?
ಢಾಕಾ(ರಾಯಿಟರ್ಸ್): ಬಾಂಗ್ಲಾದೇಶ ಬ್ಯಾಂಕ್ ಗವರ್ನರ್ ಅಬ್ದುರ್ ರೌಫ್ ತಾಲೂಕ್ದರ್ ಶನಿವಾರ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ಹುದ್ದೆಯು ಮಹತ್ವದ್ದಾಗಿರುವ ಕಾರಣ ರಾಜೀನಾಮೆ ಅಂಗೀಕಾರವಾಗಿಲ್ಲ ಎಂದು ಹಣಕಾಸು ಸಚಿವಾಲಯ ಸಲಹೆಗಾರ ಸಲೆಹುದ್ದೀನ್ ಅಹ್ಮದ್ ತಿಳಿಸಿದ್ದಾರೆ. ಢಾಕಾ ವಿಶ್ವವಿದ್ಯಾಲಯ ಕುಲಪತಿ ಎ.ಎಸ್.ಎಂ.ಮಕ್ಸೂದ್ ಕಮಾಲ್ ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.