ಢಾಕಾ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ (84) ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಗುರುವಾರ ರಾತ್ರಿ 8 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಝ್-ಝಮಾನ್, ಯೂನಸ್ ಅವರಿಗೆ ಆಡಳಿತದಲ್ಲಿ ನೆರವಾಗಲು 15 ಸದಸ್ಯರ ಸಲಹಾ ಸಮಿತಿ ಇರಲಿದೆ ಎಂದು ಹೇಳಿದರು.
ಮೀಸಲಾತಿ ನೀತಿ ವಿರೋಧಿಸಿ ದೇಶದಾದ್ಯಂತ ನಡೆದ ಹಿಂಸಾಚಾರದ ಬೆನ್ನಲ್ಲೇ, ಪ್ರಧಾನಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದ ಶೇಖ್ ಹಸೀನಾ ಅವರು ದೇಶ ತೊರೆದಿದ್ದರು. ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಆರ್ಥಿಕ ತಜ್ಞ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಮಂಗಳವಾರ ನೇಮಿಸಿದ್ದರು.
ಹಿಂಸೆ ಬಿಡಿ, ಶಾಂತಿ ಕಾಯ್ದುಕೊಳ್ಳಿ: 'ಎಲ್ಲರೂ ಹಿಂಸಾಚಾರದಿಂದ ದೂರವಿದ್ದು ಶಾಂತಿ ಕಾಯ್ದುಕೊಳ್ಳಬೇಕು. ಈ ಮೂಲಕ ಉತ್ತಮ ರಾಷ್ಟ್ರ ನಿರ್ಮಿಸುವ ಅವಕಾಶವನ್ನು ಬಳಸಿಕೊಳ್ಳಬೇಕು' ಎಂದು ಮೊಹಮ್ಮದ್ ಯೂನಸ್ ಸಾರ್ವಜನಿಕರಿಗೆ ಕರೆ ನೀಡಿದರು.
ಬಾಂಗ್ಲಾದೇಶಕ್ಕೆ ತೆರಳುವ ಮುನ್ನ, ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು. 'ಶಾಂತರಾಗಿರಿ ಮತ್ತು ದೇಶ ಕಟ್ಟಲು ಸಿದ್ಧರಾಗಿರಿ. ಒಂದು ವೇಳೆ ಹಿಂಸೆ ಹಾದಿಯನ್ನು ಹಿಡಿದರೆ ಎಲ್ಲವೂ ನಾಶವಾಗುತ್ತದೆ' ಎಂದು ಅವರು ಕಿವಿಮಾತು ಹೇಳಿದರು.
'ನಮ್ಮ ಸುಂದರ ದೇಶವನ್ನು ಸಾಕಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವ ಅವಕಾಶಗಳು ನಮ್ಮ ಮುಂದಿದ್ದು, ನಮಗಾಗಿ ಮತ್ತು ನಮ್ಮ ಪೀಳಿಗೆಗಾಗಿ ಅದ್ಭುತ ದೇಶವನ್ನು ರೂಪಿಸಬೇಕಿದೆ' ಎಂದರು.
ದೇಶದ ಎರಡನೇ ವಿಜಯೋತ್ಸವ ಆಚರಣೆಗೆ ನೆರವಾಗಿರುವ ಬುದ್ಧಿವಂತ ವಿದ್ಯಾರ್ಥಿಗಳಿಗೆ ಮತ್ತು ಅವರನ್ನು ಬೆಂಬಲಿಸಿದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ಇದೇ ವೇಳೆ ಹೇಳಿದರು.
'ಈ ವಿಜಯ ನಮ್ಮ ಕೈತಪ್ಪದಂತೆ ಎಚ್ಚರ ವಹಿಸೋಣ' ಎಂದ ಅವರು, 'ಕೆಲವೇ ತಿಂಗಳಲ್ಲಿ ಹೊಸ ಚುನಾವಣೆ ನಡೆಸಬೇಕು ಎಂಬುದು ನನ್ನ ಆಶಯ' ಎಂದು ತಿಳಿಸಿದರು.
469ಕ್ಕೆ ಏರಿದ ಮೃತರ ಸಂಖ್ಯೆ: ಶೇಖ್ ಹಸೀನಾ ನೇತೃತ್ವದ ಅವಾಮಿ ಪಕ್ಷದ ಕನಿಷ್ಠ 29 ಬೆಂಬಲಿಗರ ಮೃತದೇಹಗಳು ದೇಶದ ವಿವಿಧೆಡೆ ಪತ್ತೆಯಾಗಿವೆ. ಈ ಮೂಲಕ ಮೀಸಲಾತಿ ನಿಯಮ ವಿರೋಧಿಸಿ ಜುಲೈನಿಂದ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿದಂತಾಗಿದೆ.
ಭಾರತಕ್ಕೆ ಮರಳಿ ಬಂದ ಹೈಕಮಿಷನ್‌ನ ಸಿಬ್ಬಂದಿ
ನವದೆಹಲಿ: ಢಾಕಾದಲ್ಲಿರುವ ಭಾರತದ ಹೈಕಮಿಷನ್‌ನ ಸೇವೆಗೆ ಅತ್ಯವಶ್ಯವಲ್ಲದ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರು ಸ್ವಯಂಪ್ರೇರಿತರಾಗಿ ವಾಣಿಜ್ಯ ವಿಮಾನದ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಬಾಂಗ್ಲಾದೇಶದಲ್ಲಿ ಭಾರತೀಯ ಹೈಕಮಿಷನ್ ಇನ್ನೂ ಕಾರ್ಯನಿರ್ವಹಿಸುತ್ತಿದೆ' ಎಂದು ತಿಳಿಸಿವೆ.
ಬಾಂಗ್ಲಾದಲ್ಲಿ ಕಳೆದ ಕೆಲ ದಿನಗಳಿಂದ ಉಂಟಾದ ರಾಜಕೀಯ ಬಿಕ್ಕಟ್ಟಿನಿಂದಾಗಿ ಹಿಂಸಾಚಾರ ಭುಗಿಲೆದ್ದಿದೆ. ಸರ್ಕಾರ ವಿರೋಧಿ ಪ್ರತಿಭಟನೆ ತೀವ್ರಗೊಂಡ ನಂತರ ಪ್ರಧಾನಿ ಶೇಖ್ ಹಸೀನಾ ಅವರು ಸೋಮವಾರವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ದೆಹಲಿಗೆ ಬಂದಿದ್ದಾರೆ.