ನವದೆಹಲಿ: ಏರ್ ಇಂಡಿಯಾ ಮಂಗಳವಾರ ಸಂಜೆಯಿಂದಲೇ ರಾಷ್ಟ್ರ ರಾಜಧಾನಿಯಿಂದ ಢಾಕಾಕ್ಕೆ ತನ್ನ ನಿಗದಿತ ವಿಮಾನಯಾನವನ್ನು ಪುನರಾರಂಭಿಸಿತು. ವಿಸ್ತಾರಾ ಕೂಡ ತನ್ನ ನಿಗದಿತ ವಿಮಾನ ಸೇವೆಗಳನ್ನು ಬುಧವಾರ (ಆ.7) ಪುನರಾರಂಭಿಸಲಿದೆ.
ಬಾಂಗ್ಲಾದೇಶದಲ್ಲಿ ಅನಿಶ್ಚಿತ ಪರಿಸ್ಥಿತಿ ಇರುವುದರಿಂದ ವಿಸ್ತಾರಾ ಮತ್ತು ಇಂಡಿಗೋ ಎರಡೂ ಮಂಗಳವಾರ ಬಾಂಗ್ಲಾದೇಶದ ರಾಜಧಾನಿಗೆ ತಮ್ಮ ವಿಮಾನಗಳನ್ನು ರದ್ದುಗೊಳಿಸಿದ್ದವು.
ಅಲ್ಲಿನ ಸದ್ಯದ ಪರಿಸ್ಥಿತಿಯಿಂದಾಗಿ, ಆಗಸ್ಟ್ 4 ಮತ್ತು 7ರ ನಡುವೆ ಢಾಕಾಗೆ ಮತ್ತು ಅಲ್ಲಿಂದ ಭಾರತಕ್ಕೆ ಬರುವ ಯಾವುದೇ ವಿಮಾನಗಳಿಗೆ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಪ್ರಯಾಣ ಮರುಹೊಂದಿಸುವಿಕೆಗೆ ಒಂದು ಬಾರಿಯ ವಿನಾಯಿತಿ ನೀಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಅದರಲ್ಲೂ ಆ.5ರಂದು ಅಥವಾ ಅದಕ್ಕೂ ಮೊದಲು ಬುಕ್ ಮಾಡಿದ್ದ ಟಿಕೆಟ್‌ಗಳಿಗೆ ಈ ವಿನಾಯಿತಿ ಅನ್ವಯಿಸುತ್ತದೆ.
ಟಾಟಾ ಗ್ರೂಪ್-ಮಾಲೀಕತ್ವದ ವಿಮಾನಯಾನ ಸಂಸ್ಥೆಯು ರಾಷ್ಟ್ರ ರಾಜಧಾನಿಯಿಂದ ಢಾಕಾಕ್ಕೆ ನಿತ್ಯ ಎರಡು ವಿಮಾನಗಳ ಸೇವೆ ಕಲ್ಪಿಸುತ್ತಿದೆ. ಅಧಿಕಾರಿಯೊಬ್ಬರ ಪ್ರಕಾರ, ವಿಸ್ತಾರಾ ಬುಧವಾರದಿಂದ ವೇಳಾಪಟ್ಟಿಯ ಪ್ರಕಾರವೇ ಸೇವೆಗಳನ್ನು ಪುನರಾರಂಭಿಸಲಿದೆ.
ವಿಸ್ತಾರಾ ಮುಂಬೈನಿಂದ ಢಾಕಾಕ್ಕೆ ನಿತ್ಯ ಒಂದು ವಿಮಾನ, ದೆಹಲಿಯಿಂದ ಢಾಕಾಕ್ಕೆ ವಾರದಲ್ಲಿ ಮೂರು ವಿಮಾನಗಳ ಸೇವೆ ಒದಗಿಸುತ್ತಿದೆ.
ಇಂಡಿಗೋ ಬುಧವಾರ ಢಾಕಾಕ್ಕೆ ವಿಮಾನ ಸಂಚಾರ ಆರಂಭಿಸಬಹುದೆಂದು ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ, ಇಂಡಿಗೋ ದೆಹಲಿ, ಮುಂಬೈ ಮತ್ತು ಚೆನ್ನೈನಿಂದ ಢಾಕಾಕ್ಕೆ ನಿತ್ಯ ಒಂದೊಂದು ವಿಮಾನವನ್ನು ಮತ್ತು ಕೋಲ್ಕತ್ತದಿಂದ ಢಾಕಾಕ್ಕೆ ದಿನಕ್ಕೆ ಎರಡು ವಿಮಾನಗಳ ಸೇವೆಗಳನ್ನು ನಿರ್ವಹಿಸುತ್ತಿದೆ.