ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸರಳೀಕೃತ ಪಿಂಚಣಿ ಅರ್ಜಿ ನಮೂನೆಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ಬಿಡುಗಡೆ ಮಾಡಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜಿತೇಂದ್ರ ಸಿಂಗ್, 'ಒಟ್ಟು ಒಂಬತ್ತು ಬಗೆಯ ಅರ್ಜಿಯನ್ನು ಒಂದುಗೂಡಿಸಿ 'ಫಾರ್ಮ್ 6ಎ' ಎಂಬ ಅರ್ಜಿಯನ್ನು ಹೊರತರಲಾಗಿದೆ.
'ಹೊಸ ಅರ್ಜಿ ನಮೂನೆಯು 2024ರ ಡಿಸೆಂಬರ್ ನಂತರದಲ್ಲಿ ನಿವೃತ್ತಿಯಾಗಲಿರುವ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ Bhavishya/e-HRMS ಪೋರ್ಟಲ್‌ನಲ್ಲಿ ಸಿಗಲಿದೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಮೂಲಕ 'ಭವಿಷ್ಯ'ವನ್ನು ಜಾರಿಗೆ ತರಲಾಗಿದೆ. ಇದರ ಮೂಲಕ ನಿವೃತ್ತಿಯಾಗುವವರಿಗೆ ಬಾಕಿ ಹಣ ಪಾವತಿ ಹಾಗೂ ನಿವೃತ್ತಿ ದಿನವೇ ಪಿಂಚಣಿ ಪಾವತಿ ಆದೇಶ ನೀಡುವ ಕ್ರಮವೂ ಒಳಗೊಂಡಿದೆ. ಪಿಂಚಣಿ ಮಂಜೂರು ಹಾಗೂ ಪಾವತಿ ಕ್ರಮ ಕುರಿತಂತೆ ಆನ್‌ಲೈನ್ ಮೂಲಕ ಮಾಹಿತಿ ಪಡೆಯುವಂತೆ ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಪಿಂಚಣಿ ಪಾವತಿ ಕುರಿತು ನಿವೃತ್ತಿಯಾದ ವ್ಯಕ್ತಿ ಹಾಗೂ ಇಲಾಖೆಯ ಅಧಿಕಾರಿಗಳು ಇದರ ಮೂಲಕ ಮಾಹಿತಿ ಪಡೆಯಬಹುದು. ಜತೆಗೆ ಇಪಿಆರ್‌ಒ ಅನ್ನು ಡೌನ್‌ಲೋಡ್ ಕೂಡಾ ಮಾಡಲು ಅನುಕೂಲವಾಗುವಂತೆ ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
'ಕೇವಲ ಒಂದು ಸಹಿ ಮೂಲಕ ಪಿಂಚಣಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ 'ಭವಿಷ್ಯ'ವನ್ನು ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಪ್ರತಿಯೊಂದನ್ನೂ ಡಿಜಿಟಲೀಕರಣಗೊಳಿಸಿ, ಇಡೀ ಪಿಂಚಣಿ ಪ್ರಕ್ರಿಯೆಯನ್ನೇ ಸರಳಗೊಳಿಸುವ ಪ್ರಯತ್ನ ಇದಾಗಿದೆ. ಇದರಿಂದ ಕಾಗದ ರಹಿತ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ' ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.