ನವದೆಹಲಿ: ಅಮೆರಿಕದ ಸಂಶೋಧನೆ ಮತ್ತು ಹೂಡಿಕೆ ಕಂಪನಿ ಹಿಂಡೆನ್‌ಬರ್ಗ್ ಮಾಡಿರುವ ಆರೋಪವನ್ನು ಅದಾನಿ ಗ್ರೂಪ್ ತಿರಸ್ಕರಿಸಿದೆ. ಆಧಾರರಹಿತವಾದ ಈ ಆರೋಪಗಳನ್ನು ವೈಯಕ್ತಿಕ ಲಾಭಕ್ಕಾಗಿ ಮಾಡಲಾಗುತ್ತಿದೆ. ಇದು ದುರುದ್ದೇಶದಿಂದ ಕೂಡಿದ್ದು, ಸಂಸ್ಥೆಯ ಘನತೆಗೆ ಹಾನಿಯುಂಟು ಮಾಡುವ ಪ್ರಯತ್ನವಾಗಿದೆ ಎಂದು ಹೇಳಿದೆ.

ಅಮೆರಿಕದ ಸಂಸ್ಥೆಯು ತನ್ನ ವರದಿಯಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಕೆಲವು ಆಯ್ದ ಸಂಗತಿಗಳನ್ನು ತನ್ನದೇ ಆದ ರೀತಿಯಲ್ಲಿ ಜಾಣತನದಿಂದ ಪ್ರಸ್ತುತಪಡಿಸಿದೆ. ವರದಿಯಲ್ಲಿ ಹೆಸರಿಸಲಾದ ವ್ಯಕ್ತಿಗಳೊಂದಿಗೆ ಯಾವುದೇ ವ್ಯವಹಾರ ಸಂಬಂಧವನ್ನು ಹೊಂದಿಲ್ಲ ಎಂದು ಅದಾನಿ ಗ್ರೂಪ್ ತಿಳಿಸಿದೆ. ಈ ಹೊಸ ಆರೋಪಗಳು, ಹಿಂದೆ ಸಂಸ್ಥೆಯ ಅಪಖ್ಯಾತಿಗೆ ಕಾರಣವಾದ ಹಿಂಡೆನ್‌ಬರ್ಗ್ ಕ್ಲೈಮ್‌ಗಳ ಮರುಬಳಕೆಯಾಗಿದೆ. ಇವುಗಳನ್ನು ಸಂಪೂರ್ಣವಾಗಿ ತನಿಖೆ ಮಾಡಿದ್ದು ಆಧಾರರಹಿತವೆಂದು ಸಾಬೀತುಪಡಿಸಲಾಗಿದೆ. 2024ರ ಜನವರಿಯಲ್ಲಿ ಸುಪ್ರೀಂಕೋರ್ಟ್ ಈ ಆರೋಪಗಳನ್ನು ತಿರಸ್ಕರಿಸಿದೆ ಎಂದು ಅದಾನಿ ಗ್ರೂಪ್ ಹೇಳಿದೆ.
ತನ್ನ ಸಾಗರೋತ್ತರ ವ್ಯವಹಾರವು ಸಂಪೂರ್ಣ ಪಾರದರ್ಶಕವಾಗಿದೆ. ಎಲ್ಲಾ ಸಂಬಂಧಿತ ವಿವರಗಳನ್ನು ಹಲವಾರು ಸಾರ್ವಜನಿಕ ದಾಖಲೆಗಳಲ್ಲಿ ನಿಯಮಿತವಾಗಿ ಬಹಿರಂಗಪಡಿಸಲಾಗುತ್ತದೆ. ನಾವು ಪಾರದರ್ಶಕತೆ, ಎಲ್ಲಾ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಅನುಸರಣೆಗೆ ದೃಢವಾಗಿ ಬದ್ಧರಾಗಿದ್ದೇವೆ ಎಂದು ಸಂಸ್ಥೆಯು ತಿಳಿಸಿದೆ.
ಅದಾನಿ ಸಮೂಹವು ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಅಥವಾ ಅವರ ಪತಿ ಧವಲ್ ಬುಚ್ ಅವರೊಂದಿಗೆ ಯಾವುದೇ ವಾಣಿಜ್ಯ ಸಂಬಂಧವನ್ನು ಹೊಂದಿಲ್ಲ. ಅಮೆರಿಕ ಕಂಪನಿಯು, ಅದಾನಿ ಗ್ರೂಪ್ನ ಮಾನಹಾನಿ ಮಾಡಲು ಉದ್ದೇಶಪೂರ್ವಕವಾಗಿ ಈ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅದಾನಿ ಗ್ರೂಪ್ ಆರೋಪಿಸಿದೆ.
ಇತ್ತೀಚೆಗೆ ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಕಡಲಾಚೆಯ ಅದಾನಿ ಸಂಸ್ಥೆಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿತ್ತು.