ತ್ರಿಶೂರ್: ನಟ- ನಿರ್ದೇಶಕರ ವಿರುದ್ಧ ಇತ್ತೀಚೆಗೆ ಕೇಳಿಬರುತ್ತಿರುವ ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿದಂತೆ ಚಿತ್ರರಂಗದ ಬಗ್ಗೆ ಸಾರ್ವಜನಿಕರ ಗ್ರಹಿಕೆಯನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂತಹ ಆರೋಪಗಳು ಮಾಧ್ಯಮಗಳಿಗೆ ಆಹಾರವಾಗಿವೆ ಮತ್ತು ಅದರಿಂದ ಅವರು ಹಣ ಗಳಿಸುತ್ತಾರಷ್ಟೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಸಿನಿಮಾದಂತಹ ಬೃಹತ್ ಉದ್ಯಮವನ್ನು ನಾಶ ಮಾಡುವ ಪ್ರಯತ್ನ ಮಾಡಬಾರದು ಎಂದು ಸಹ ಹೇಳಿದ್ದಾರೆ.
ಸಿಪಿಐ(ಎಂ) ಶಾಸಕ ಎಂ ಮುಖೇಶ್ ಸೇರಿದಂತೆ ವಿವಿಧ ನಿರ್ದೇಶಕರು ಮತ್ತು ನಟರ ವಿರುದ್ಧ ಇತ್ತೀಚಿನ ಲೈಂಗಿಕ ಕಿರುಕುಳ ಮತ್ತು ನಿಂದನೆಯ ಆರೋಪಗಳ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಇದೆಲ್ಲವೂ ನಿಮಗೆ ಆಹಾರವಾಗಿದೆ, ನೀವು ಹಣವನ್ನು ಗಳಿಸಲು ಇದನ್ನು ಬಳಸಬಹುದು.ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಈ ಸಮಸ್ಯೆಗಳು ನ್ಯಾಯಾಲಯದ ಮುಂದಿರುವುದರಿಂದ ನ್ಯಾಯಾಲಯ ನಿರ್ಧಾರಕ್ಕೆ ಬರುತ್ತವೆ. ನೀವು ಮಾಧ್ಯಮದವರು ನಿಮ್ಮ ಸ್ವಂತ ಲಾಭಕ್ಕಾಗಿ ಜನರನ್ನು ಪರಸ್ಪರ ಹೊಡೆದಾಡುವಂತೆ ಮಾಡುತ್ತಿದ್ದೀರಿ, ನೀವು ಸಾರ್ವಜನಿಕ ಗ್ರಹಿಕೆಯನ್ನು ತಪ್ಪುದಾರಿಗೆಳೆಯುತ್ತಿದ್ದೀರಿ ಎಂದರು.
ನೀವು ಜನರಿಗೆ ಏನು ಹೇಳುತ್ತಿದ್ದೀರಿ, ತೀರ್ಪು ಕೊಡಲು ನೀವು ನ್ಯಾಯಾಲಯವೇ, ಅದನ್ನು ನ್ಯಾಯಾಲಯವು ನಿರ್ಧರಿಸುತ್ತದೆ. ನ್ಯಾಯಾಲಯ ನಿರ್ಧರಿಸಲಿ ಬಿಡಿ ಎಂದು ಹೇಳಿದರು.
ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳ ಮತ್ತು ನಿಂದನೆ ಕುರಿತು ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿಯ ಪ್ರಕಟಣೆಯು ಹಲವಾರು ನಟಿಯರು ನಟರಿಂದ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಆರೋಪಗಳ ನಡುವೆಯೇ, ಹೇಮಾ ಸಮಿತಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಮಾಡಿರುವ ಆರೋಪಗಳ ತನಿಖೆಗೆ ಏಳು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ಸರ್ಕಾರ ಘೋಷಿಸಿತು. ಆ ಬಳಿಕ ವಿವಿಧ ನಟರು ಮತ್ತು ನಿರ್ದೇಶಕರ ವಿರುದ್ಧ ಹೆಚ್ಚಿನ ದೂರುಗಳು ಬಂದವು.
2017 ರಲ್ಲಿ ಕೇರಳದಲ್ಲಿ ಖ್ಯಾತ ನಟಿಯೊಬ್ಬರ ವಿರುದ್ಧ ಖ್ಯಾತ ನಟರು ನಡೆಸಿದ ಹಲ್ಲೆ ಪ್ರಕರಣದ ನಂತರ ಕೇರಳ ಸರ್ಕಾರವು ರಚಿಸಿದ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರಿಗೆ ಕಿರುಕುಳ ಮತ್ತು ಶೋಷಣೆಯ ನಿದರ್ಶನಗಳನ್ನು ಬಹಿರಂಗಪಡಿಸಿದೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದೆ.