ನವದೆಹಲಿ: ಆರೋಪಿಯೊಬ್ಬರಿಗೆ ಜಾಮೀನು ನೀಡಬಹುದು ಎಂಬ ತೀರ್ಮಾನಕ್ಕೆ ಬಂದ ನಂತರ ನ್ಯಾಯಾಲಯಗಳು, ಪಾಲಿಸಲು ಸಾಧ್ಯವೇ ಇಲ್ಲದಂತಹ ಷರತ್ತುಗಳನ್ನು ವಿಧಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪತ್ನಿಯು ಘನತೆಯಿಂದ ಜೀವನ ನಡೆಸಲು ಸಾಧ್ಯವಾಗುವಂತೆ, ಆಕೆಯ ಎಲ್ಲ ಆರ್ಥಿಕ ಹಾಗೂ ಭೌತಿಕ ಅಗತ್ಯಗಳನ್ನು ಪೂರೈಸುವುದಾಗಿ ಪ್ರಮಾಣಪತ್ರ ಸಲ್ಲಿಸುವಂತೆ ವ್ಯಕ್ತಿಯೊಬ್ಬನಿಗೆ ಸೂಚಿಸುವುದು 'ಕಾರ್ಯಸಾಧುವೇ ಅಲ್ಲದ ಷರತ್ತು' ಎಂದು ನ್ಯಾಯಮೂರ್ತಿಗಳಾದ ಸಿ.ಟಿ.
ಆರೋಪಿಗೆ ಬಂಧನ ಪೂರ್ವದ ಜಾಮೀನು ಮಂಜೂರು ಮಾಡುವಾಗ, ಪಾಲಿಸಲು ಸಾಧ್ಯವಿಲ್ಲದಂತಹ ಷರತ್ತುಗಳನ್ನು ವಿಧಿಸುವುದು ಸರಿಯಲ್ಲ ಎಂದು ಹಲವು ತೀರ್ಪುಗಳು ಹೇಳುತ್ತಿರುವಾಗಲೂ, ಇಂತಹ ಷರತ್ತುಗಳಿರುವ ಆದೇಶಗಳು ಬರುತ್ತಿರುವುದು ನೋವುಂಟುಮಾಡುವ ಸಂಗತಿ ಎಂದು ಪೀಠವು ಹೇಳಿದೆ.
ಆರೋಪಿಯನ್ನು ಬಂಧಿಸದಂತೆ ಆತನಿಗೆ ಜಾಮೀನು ನೀಡುವ ಉದ್ದೇಶವು ಆತನ ಉಪಸ್ಥಿತಿ ಇರುವಂತೆ ನೋಡಿಕೊಳ್ಳುವುದು, ವಿಚಾರಣೆಯು ನ್ಯಾಯಸಮ್ಮತವಾಗಿ ಇರುವಂತೆ ಖಾತರಿಪಡಿಸುವುದು ಹಾಗೂ ತನಿಖಾ ಪ್ರಕ್ರಿಯೆಗೆ ಅಡ್ಡಿಗಳು ಎದುರಾಗದಂತೆ ನೋಡಿಕೊಳ್ಳುವುದು ಎಂದು ಪೀಠ ಹೇಳಿದೆ.
ವೈವಾಹಿಕ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಪತಿಗೆ ಜಾಮೀನು ಮಂಜೂರು ಮಾಡುವಾಗ, 'ಪತ್ನಿಯ ಎಲ್ಲ ಭೌತಿಕ ಹಾಗೂ ಆರ್ಥಿಕ ಅಗತ್ಯಗಳನ್ನು ಪೂರೈಸುವುದಾಗಿ ಪ್ರಮಾಣಪತ್ರ ಸಲ್ಲಿಸಬೇಕು' ಎಂಬ ಷರತ್ತು ವಿಧಿಸಿದ್ದ ಪಟ್ನಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನ ಈ ಪೀಠವು ರದ್ದುಪಡಿಸಿದೆ.
'ಜಾಮೀನು ಮಂಜೂರು ಮಾಡುವಾಗ ಪಾಲಿಸಲು ಸಾಧ್ಯವಾಗುವ ಷರತ್ತುಗಳನ್ನು ವಿಧಿಸುವ ಅಗತ್ಯವನ್ನು ನಾವು ಒತ್ತಿಹೇಳುತ್ತಿದ್ದೇವೆ' ಎಂದು ಅದು ಹೇಳಿದೆ.