ಕೋಲ್ಕತಾ: 'ಅಮರ್ ರಹೇ' ಮತ್ತು 'ಲಾಲ್ ಸಲಾಮ್ ಕಾಮ್ರೇಡ್' ಘೋಷಣೆಗಳ ನಡುವೆ, ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ಶುಕ್ರವಾರ ಸಂಜೆ ಕೋಲ್ಕತ್ತಾದ ಎನ್‌ಆರ್‌ಎಸ್ ಆಸ್ಪತ್ರೆಯ ಅಂಗರಚನಾಶಾಸ್ತ್ರ ವಿಭಾಗಕ್ಕೆ ಹಸ್ತಾಂತರಿಸಲಾಯಿತು.
ಸಿಪಿಎಂ ಹಿರಿಯ ನಾಯಕ ಬುದ್ಧದೇವ್ ಭಟ್ಟಾಚಾರ್ಯ ಅವರು ಕೋಲ್ಕತಾದಲ್ಲಿನ ತಮ್ಮ ನಿವಾಸದಲ್ಲಿ ಗುರುವಾರ ಬೆಳಗ್ಗೆ ನಿಧನರಾಗಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ತಮ್ಮ ಸರಳ ಜೀವನದಿಂದ ಹೆಸರಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಅವರ ಬಯಕೆಯಂತೆ, ದೇಹದ ಅಂಗಾಂಗಗಳನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಲಾಗಿದೆ.
ನಿನ್ನೆ ಸಂಜೆ 5.30ರ ಸುಮಾರಿಗೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಮುಖಂಡರು ಭಟ್ಟಾಚಾರ್ಯ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯೊಳಗೆ ಕೊಂಡೊಯ್ದರು. ಅಂಗರಚನಾಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಅಭಿಜಿತ್ ಭಕ್ತ ಅವರು ಆಸ್ಪತ್ರೆಯ ಪರವಾಗಿ ಪಾರ್ಥಿವ ಶರೀರವನ್ನು ಸ್ವೀಕರಿಸಿದರು.
ಈ ವೇಳೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ ಮುಖಂಡರಾದ ಸುಜನ್ ಚಕ್ರವರ್ತಿ, ಸೂರ್ಯಕಾಂತ ಮಿಶ್ರಾ, ರಬಿನ್ ದೇವ್ ಮತ್ತು ಬುದ್ಧದೇವ್ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಜಿ ಉಪಸ್ಥಿತರಿದ್ದರು.