ಕಾಸರಗೋಡು: ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ 'ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ' ಎಂಬ ಕಾರ್ಯಕ್ರಮದಂಗವಾಗಿ ಹಿರಿಯ ವಿದ್ವಾಂಸ, ನಿವೃತ್ತ ಪ್ರಾಂಶುಪಾಲ ಡಾ.ಯು ಶಂಕರನಾರಾಯಣ ಭಟ್ ಅವರನ್ನು ವಿದ್ಯಾನಗರದ ಚಿನ್ಮಯಾ ಕಾಲನಿಯಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಕನ್ನಡ ಸಾಹಿತ್ಯಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊತ್ತೋಡಿ ಅಧ್ಯಕ್ಷತೆ ವಹಿಸಿ, ಶಂಕರನಾರಾಯಣ ಭಟ್ ಅವರಿಗೆ ಶಾಲು ಹೊದಿಸಿ ಫಲಪುಷ್ಪ,ಸ್ಮರಣಿಕೆ ನೀಡಿ ಅಭಿನಂದಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ. ಪಿ.ಎನ್ ಮೂಡಿತ್ತಾಯ ಅಭಿನಂದನಾ ಭಾಷಣ ಮಾಡಿ ಕಾಸರಗೋಡಿನ ಕನ್ನಡ ಭಾಷೆ, ಶೈಕ್ಷಣಿಕ ರಂಗಕ್ಕೆ ಡಾ.ಯು ಶಂಕರನಾರಾಯಣ ಭಟ್ ಸಲ್ಲಿಸಿದ ಸೇವೆ ಮಹತ್ತರವಾದುದು. ಅವರ ಸಂಶೋಧನಾ ಪ್ರವೃತ್ತಿ,ಕಾರ್ಯದಕ್ಷತೆ ,ಕನ್ನಡಾಭಿಮಾನ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ.ಕೆ ಕಮಲಾಕ್ಷ, ನಿವೃತ್ತ ಉಪನ್ಯಾಸಕಿ ಡಾ.ಯು.ಮಹೇಶ್ವರಿ, ಉಪನ್ಯಾಸಕ ಡಾ.ರಾಧಾಕೃಷ್ಣ ಬೆಳ್ಳೂರು, ನ್ಯಾಯವಾದಿ, ಲೇಖಕ ಥೋಮಸ್ ಡಿ'ಸೋಜ, ರಮೇಶ ಏತಡ್ಕ ಉಪಸ್ಥಿತರಿದ್ದರು.
ಡಾ. ಉಪ್ಪಂಗಳ ಶಂಕರನಾರಾಯಣ ಭಟ್ ಅವರು ಸನ್ಮಾನಕ್ಕೆ ಉತ್ತರಿಸಿ ಮಾತನಾಡಿ, ಯಕ್ಷಗಾನ ರಂಗದ ಕುರಿತು ಇನ್ನಷ್ಟು ಸಂಶೋಧನಾ ಕೃತಿಗಳನ್ನು ರಚಿಸುವ ಬಯಕೆ ವ್ಯಕ್ತಪಡಿಸಿದರು. ವಯನಾಡು ದುರಂತದಲ್ಲಿ ಮಡಿದವರಿಗೆ ಸಭೆಯು ಸಂತಾಪ ವ್ಯಕ್ತಪಡಿಸಲಾಯಿತು.
ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ವಂದಿಸಿದರು.