ಕಾಸರಗೋಡು: ಇತಿಹಾಸಪ್ರಸಿದ್ಧ ಕೋಳ್ಯೂರು ಶ್ರೀ ಶಂಕರನಾರಯಣ ದೇವಸ್ಥಾನದ ಬೀಗ ಒಡೆದು 375ಗ್ರಾಂ ಚಿನ್ನ, 3ಕಿಲೋ ಬೆಳ್ಳಿ ಆಭರಣ ಕಳವುಗೈದ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ನಿರ್ಲಕ್ಷ್ಯ ಧೋರಣೆ ತಳೆಯುತ್ತಿದ್ದು, ಇದನ್ನು ಪ್ರತಿಭಟಿಸಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಮಂಜೇಶ್ವರ ಪೊಲೀಸ್ ಠಾಣೆಗೆ ಮುತ್ತಿಗೆ ನಡೆಸಲು ತೀರ್ಮಾನಿಸಿರುವುದಾಗಿ ದೇವಸ್ಥಾನ ಸಮಿತಿ ಅಧ್ಯಕ್ಷ ಬೋಳಂತಕೋಡಿ ರಾಮ ಭಟ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಜುಲೈ 26ರಂದು ಕಳವು ನಡೆದಿದ್ದು, ಒಂದು ತಿಂಗಳು ದಾಟಿದರೂ ಕಳ್ಳರ ಜಾಡು ಪತ್ತೆಹಚ್ಚುವಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ. ಬೀಗ ಒಡೆದು ದೇಗುಲ ಪ್ರವೇಶಿಸಿ ಕಳವುನಡೆಸಿರುವುದಲ್ಲದೆ, ದೇವಾಲಯವನ್ನು ಅಪವಿತ್ರಗೊಳಿಸಲಾಗಿದೆ. ದೇವಸ್ಥಾನದ ಸಿಸಿಟಿವಿಯಲ್ಲಿ ಕಳ್ಳನ ಚಲನವಲನದ ದೃಶ್ಯಾವಳಿ ಸೆರೆಯಾಗಿದ್ದರೂ, ಪೆÇಲೀಸರಿಗೆ ಕಳ್ಳನನ್ನು ಸೆರೆಹಿಡಿಯಲು ಸಾಧ್ಯವಾಗದಿರುವುದು ಸಂಶಯಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದಿಂದ ದೇವಸ್ಥಾನದ ಸುತ್ತ ಮುತ್ತಲಿನ ವಿವಿಧ ಮನೆಗಳಲ್ಲಿ ಹಾಗೂ ದೇವಸ್ಥಾನದ ಆಡಳಿತವಿರುವ ಶಾಲೆಯಲ್ಲಿ ಕಳವು ನಡೆದಿದ್ದರೂ, ಇದುವರೆಗೆ ಕಳ್ಳರ ಪತ್ತೆಹಚ್ಚಲು ಸಾಧ್ಯವಾಗದಿರುವುದು ಪೊಲೀಸರ ನಿರ್ಲಕ್ಷ್ಯ ಸಾಬೀತುಪಡಿಸಿದೆ. ಕೋಳ್ಯೂರು ದೇವಸ್ಥಾನ ಸನಿಹದ ಮನೆಯೊಂದರಲ್ಲಿ ನಡೆದ ಕಳವುಕೃತ್ಯದಲ್ಲಿ ಕಳ್ಳರು ಸಂಚರಿಸಲು ಬಳಸಿದ್ದ ಕಾರಿನ ನಂಬರ್ ನೀಡಿದ್ದರೂ, ಈ ಬಗ್ಗೆ ತನಿಖೆ ನಡೆಸಲೂ ಪೊಲೀಸರು ಮುಂದಾಗಿಲ್ಲ.
ಪೊಲೀಸರ ನಿಷ್ಕ್ರಿಯ ಧೋರಣೆ ಕಳವು ಕೃತ್ಯ ಹೆಚ್ಚಲು ಕಾರಣವಾಗಿದೆ. ಮಂಜೇಶ್ವರಂ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಳ್ಳರನ್ನು ಸೆರೆಹಿಡಿಯುವಲ್ಲಿ ಪೆÇಲೀಸರು ತೋರುವ ನಿರಾಸಕ್ತಿ ಭಕ್ತರನ್ನು ಕೆರಳಿಸಿದೆ. ದೇವಾಲಯದಿಂದ ಕಳವು ನಡೆಸಿದವರನ್ನು ಬಂಧಿಸುವಂತೆ ಒತ್ತಡ ಹೇರಲು ಪೊಲೀಸ್ ಠಾಣೆ ಮುತ್ತಿಗೆಯೊಂದೇ ಉಳಿದಿರುವ ದಾರಿ ಎಂಬುದಾಗಿ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠೀಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರವಿಶಂಕರ ಹೊಳ್ಳ. ಕೃಷ್ಣ ಕುಮಾರ್, ದೇವಸ್ಥಾನದ ಧರ್ಮದರ್ಶಿ ವಕೀಲ ವಿಠಲ ಭಟ್ ಮೊಗಸಾಲೆ, ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ್ ತಂತ್ರಿ, ಕೃಷ್ಣ ಪ್ರಸಾದ್ ಕೊಮ್ಮೆ ಉಪಸ್ಥಿತರಿದ್ದರು.