ಕಾಸರಗೋಡು: ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಸ್ವಂತ ನಿವೇಶನ ಹಾಗೂ ಕಟ್ಟಡ ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಹೇಳಿದರು. ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸ್ವಂತ ಜಮೀನು ಇಲ್ಲದ 55 ಅಂಗನವಾಡಿಗಳಿದ್ದು, ಕಂದಾಯ, ಸ್ಥಳೀಯಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ತಕ್ಷಣ ಅಂಗನವಾಡಿಗಳಿಗಾಗಿ ಭೂಮಿ ಹಾಗೂ ಕಟ್ಟಡ ನಿರ್ಮಾಣದ ಕೆಲಸ ನಡೆಸಬೇಕು. ಸ್ವಂತ ಜಮೀನು ಹೊಂದಿರುವ ಅಂಗನವಾಡಿಗಳನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಸೇರಿಸಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಭೂರಹಿತರಿಗೆ, ಅಂಗನವಾಡಿಗಳಿಗೆ ಗುರುತಿಸಿರುವ ಭೂಮಿಯನ್ನು ಪರಿಣಿತ ತಂಡ ಪರಿಶೀಲನೆ ನಡೆಸಿ ಕಾರ್ಯಸಾಧ್ಯತೆ ಬಗ್ಗೆ ಮೌಲ್ಯಮಾಪನ ಮಾಡಿ ವರದಿ ಸಲ್ಲಿಸಬೇಕು. ಈ ಮೂಲಕ ಒಂದು ತಿಂಗಳೊಳಗೆ ಎಲ್ಲ ಅಂಗನವಾಡಿಗಳಿಗೆ ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಜಿಲ್ಲಾ ಯೋಜನಾಧಿಕಾರಿ ಟಿ. ರಾಜೇಶ್, ಜಿಲ್ಲಾ ಐಸಿಡಿಎಸ್ ಕಾರ್ಯಕ್ರಮ ಅಧಿಕಾರಿ ಎಸ್. ಚಿತ್ರಲೇಖಾ, ವಿವಿಧ ಬ್ಲಾಕ್‍ಗಳ ಸಿಡಿಪಿಒಗಳು, ಐಸಿಡಿಎಸ್ ಮೇಲ್ವಿಚಾರಕರು, ತಹಶೀಲ್ದಾರರು, ಗ್ರಾಮಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿಗಳು ಮುಂತಾದವರು ಭಾಗವಹಿಸಿದ್ದರು.