ವಯನಾಡ್: 'ಕೇರಳದ ವಯನಾಡ್ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರಿ ಮಳೆ ಹಾಗೂ ಭೀಕರ ಭೂಕುಸಿತದಲ್ಲಿ ಕಣ್ಮರೆಯಾದವರಿಗಾಗಿ ಹುಡುಕಾಟ ಮುಂದುವರಿದಿದ್ದು, ಸದ್ಯ ಅದು ಅರಣ್ಯದಂಚಿನಲ್ಲಿರುವ ಚಾಲಿಯಾರ್ ನದಿ ಹಾಹೂ ನದಿ ಪಾತ್ರದ ಪ್ರದೇಶಗಳ ಮೇಲೆ ಕೇಂದ್ರೀಕರಿಸಲಾಗಿದೆ' ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್, 'ಎನ್‌ಡಿಆರ್‌ಎಫ್, ಪೊಲೀಸ್, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಒಟ್ಟು 190 ಜನರನ್ನೊಳಗೊಂಡ ರಕ್ಷಣಾ ತಂಡ ಈ ಕಾರ್ಯಾಚರಣೆಯಲ್ಲಿ ತೊಡಗಿದೆ. ನಾಪತ್ತೆಯಾದವರಿಗಾಗಿ ಮತ್ತೊಂದು ಬಾರಿ ಶೋಧ ಕಾರ್ಯ ಕೈಗೊಳ್ಳಲಾಗಿದೆ' ಎಂದು ಅವರು ಹೇಳಿದ್ದಾರೆ.
'ಈಗಾಗಲೇ ಈ ಎಲ್ಲಾ ಪ್ರದೇಶಗಳಲ್ಲಿ ಒಂದು ಬಾರಿ ಶೋಧ ಕಾರ್ಯ ಪೂರ್ಣಗೊಂಡಿದೆ. ನೀರಿನ ಮಟ್ಟದಲ್ಲಿ ಬದಲಾವಣೆ ಆಗಿದ್ದರಿಂದ, ಇನ್ನೂ ಕೆಲ ಮೃತದೇಹಗಳು ಪತ್ತೆಯಾಗಿದ್ದವು. ಈಗ ಮತ್ತೊಮ್ಮೆ ಶೋಧ ಕಾರ್ಯ ಆರಂಭಿಸಲಾಗಿದೆ. ಮುಂಡಕ್ಕೈ ಹಾಗೂ ಚೂರಲ್‌ಮಲ ಪ್ರದೇಶದಲ್ಲಿ ಭಾನುವಾರ ಭಾರಿ ಮಳೆಯಾಗಿತ್ತು. ಸೋಮವಾರದಿಂದ ಈ ಇಡೀ ಪ್ರದೇಶವನ್ನು ಮತ್ತೊಮ್ಮೆ ಶೋಧಿಸಲಾಗುವುದು. ಒಟ್ಟು ಐದು ವಲಯಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ' ಎಂದು ಅಜಿತ್ ಕುಮಾರ್ ಹೇಳಿದ್ದಾರೆ.
ಸೋಮವಾರ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಲವರ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಕೆಲ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ನದಿ ಪಾತ್ರದ ಮೇಲ್ಭಾಗದಲ್ಲಿ ಶೋಧ ಕಾರ್ಯ ಪೂರ್ಣಗೊಂಡಿದೆ. ನದಿಯ ಕೆಳಭಾಗದಲ್ಲಿ ಇದು ನಡೆಯಬೇಕಿದೆ ಎಂದು ಹೇಳಿದ್ದಾರೆ.
ಜುಲೈ 30ರಂದು ವಯನಾಡ್‌ನ ಈ ಪ್ರದೇಶದಲ್ಲಿ ಭೂಕುಸಿತ ಉಂಟಾಗಿತ್ತು. ಈವರೆಗೂ 229 ಜನ ಮೃತಪಟ್ಟಿದ್ದಾರೆ ಹಾಗೂ 130 ಜನ ಕಣ್ಮರೆಯಾಗಿದ್ದಾರೆ. ಈವರೆಗೂ ಸಿಕ್ಕಿರುವ ಮೃತದೇಹಗಳಲ್ಲಿ 51 ದೇಹಗಳ ಗುರುತು ಪತ್ತೆಯಾಗಬೇಕಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.