ವಯನಾಡು: ಸರಣಿ ಭೂಕುಸಿತದಿಂದ ತತ್ತರಿಸಿರುವ ವಯನಾಡು ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಲು ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲಾಗುವುದು. ದುರಂತದಿಂದ ಎಲ್ಲವನ್ನೂ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಕೇರಳ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ನಿಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಭರವಸೆ ನೀಡಿದ್ದಾರೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಭೂಕುಸಿತದಿಂದ ಸುಮಾರು 226 ಮಂದಿ ಮೃತಪಟ್ಟಿದ್ದಾರೆ. ಇನ್ನೂ 130 ಜನರು ನಾಪತ್ತೆಯಾಗಿದ್ದಾರೆ. ಪರಿಸ್ಥಿತಿ ಪರಿಶೀಲನೆ ಹಾಗೂ ಪುನರ್ವಸತಿ ಕಾರ್ಯಗಳ ಕುರಿತು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಮೋದಿ ಮಾತನಾಡಿದ್ದಾರೆ.
ಸಾಕಷ್ಟು ಕುಟುಂಬಗಳ ಕನಸುಗಳನ್ನೇ ಛಿದ್ರಗೊಳಿಸಿದ ಭೂಕುಸಿತ ದುರಂತದಲ್ಲಿ ಬದುಕುಳಿದವರ ಜೊತೆಗೆ ಎಲ್ಲರ ಪ್ರಾರ್ಥನೆ ಇರಲಿದೆ ಎಂದು ಹೇಳಿದ್ದಾರೆ.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಸುರೇಶ್ ಗೋಪಿ, ರಾಜ್ಯ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇಂದು ಬೆಳಿಗ್ಗೆ 11ಕ್ಕೆ ಕಣ್ಣೂರ್ ವಿಮಾನ ನಿಲ್ದಾಣಕ್ಕೆ ಬಂದ ಮೋದಿ, ನಂತರ ಹೆಲಿಕಾಪ್ಟರ್ ಮೂಲಕ ವಯನಾಡಿಗೆ ತೆರಳಿದರು. ಪ್ರಯಾಣದ ವೇಳೆ ದುರಂತ ಸ್ಥಳಗಳನ್ನು ವೀಕ್ಷಿಸಿದರು.