ಕೈರೊ/ ಗಾಜಾ: ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿ ಇಸ್ರೇಲ್ ವಿಧಿಸಿರುವ ಹೊಸ ಷರತ್ತುಗಳನ್ನು ತಿರಸ್ಕರಿಸಲಾಗಿದೆ. ಬದಲಾಗಿ ಜುಲೈ 2ರಂದು ಮಾಡಿಕೊಳ್ಳಲಾದ ಒಪ್ಪಂದಕ್ಕೆ ಮಾತ್ರ ನಾವು ಬದ್ಧವಾಗಿರುವುದಾಗಿ ಹಮಾಸ್ ತಿಳಿಸಿರುವುದಾಗಿ 'ಸಿಎನ್‌ಎನ್' ವರದಿ ಮಾಡಿದೆ.

ಹೊಸ ಮಾತುಕತೆಯ ಭಾಗವಾಗಿ ಉಭಯ ರಾಷ್ಟ್ರಗಳ ಮಧ್ಯವರ್ತಿಗಳು ಭಾನುವಾರ ಕೈರೊದಲ್ಲಿ ಸಭೆ ಸೇರಿದ್ದರು.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಸೂಚನೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಂತೆ ಜುಲೈ 2ರಂದು ಮಾಡಿಕೊಳ್ಳಲಾದ ಒಪ್ಪಂದಕ್ಕೆ ಇಸ್ರೇಲ್ ಬದ್ಧವಾಗಿರಬೇಕು ಎಂದು ಹಮಾಸ್ ರಾಜಕೀಯ ಬ್ಯೂರೊ ಸದಸ್ಯ ಇಜ್ಜತ್ ಅಲ್-ರಿಷಿಕ್ ತಿಳಿಸಿದ್ದಾರೆ.
'ಯಾವುದೇ ಒಪ್ಪಂದವು ಶಾಶ್ವತ ಕದನ ವಿರಾಮ, ಗಾಜಾ ಪಟ್ಟಿಯಿಂದ ಸಂಪೂರ್ಣ ವಾಪಸಾತಿ, ಸ್ಥಳೀಯ ನಿವಾಸಿಗಳಿಗೆ ಪುರ್ನವಸತಿ ಕಲ್ಪಿಸುವಂತಹ ಅಂಶಗಳನ್ನು ಒಳಗೊಂಡಿರಬೇಕು' ಎಂಬುದು ಹಮಾಸ್ ನಿಲುವಾಗಿದೆ ಎಂದು ಇಜ್ಜತ್ ಅಲ್-ರಿಷಿಕ್ ಹೇಳಿದ್ದಾರೆ.
ಹಮಾಸ್ ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿಯನ್ನು ಆರಂಭಿಸಿತ್ತು. ದಾಳಿಯಲ್ಲಿ ಇಸ್ರೇಲ್‌ನ 1200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಗಾಜಾದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಈವರೆಗೆ 40,000ಕ್ಕೂ ಅಧಿಕ ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.