ಭದೋಹಿ : ಮದುವೆಯಾಗುವ ಭರವಸೆ ನೀಡಿ ನರ್ಸ್ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಭದೋಹಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಚಿಂತಾಮಣಿ ಶರ್ಮಾ ಎಂದು ಗುರುತಿಸಲಾಗಿದೆ. 36 ವರ್ಷದ ನರ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆಎಂ ಸಬಿಹಾ ಖಾತೂನ್, ಆರೋಪಿ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು. ಅದರಂತೆ ಆರೋಪಿ ಚಿಂತಾಮಣಿ ಶರ್ಮಾ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ವಾರಾಣಸಿಯಲ್ಲಿ ಅತನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದ ಆರೋಪಿಯು, ಸಂತ್ರಸ್ತೆ 15 ವರ್ಷದ ವಿದ್ಯಾರ್ಥಿನಿಯಾಗಿದ್ದಾಗ ಆಕೆಯೊಂದಿಗೆ ಸ್ನೇಹ ಬೆಳಸಿದ್ದ. ಜತೆಗೆ ವಿದ್ಯಾಭ್ಯಾಸಕ್ಕೂ ಸಹಾಯ ಮಾಡಿದ್ದ. ಆದಾಗ್ಯೂ, ಆರೋಪಿ ಬೆದರಿಕೆ ಹಾಕುವ ಮೂಲಕ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ' ಎಂದು ಭಾದೋಹಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮೀನಾಕ್ಷಿ ಕಾತ್ಯಾಯನ್ ಹೇಳಿದ್ದಾರೆ.
'ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ, ರಹಸ್ಯವಾಗಿ ಬೇರೊಬ್ಬ ಮಹಿಳೆಯೊಂದಿಗೆ ಮದುವೆಯಾಗಿದ್ದ' ಎಂದು ಕಾತ್ಯಾಯನ್ ಮಾಹಿತಿ ನೀಡಿದ್ದಾರೆ.
'ಮದುವೆ ವಿಚಾರ ಬಂದಾಗ ಸಂತ್ರಸ್ತೆಯನ್ನು ನಿಂದಿಸುತ್ತಿದ್ದ ಆರೋಪಿ, ಹಲವು ಬಾರಿ ಹಲ್ಲೆ ಕೂಡ ನಡೆಸಿದ್ದ. ಜತೆಗೆ, ಸಂತ್ರಸ್ತೆಯ ಮನೆಯನ್ನು ಧ್ವಂಸಗೊಳಿಸಿದ್ದ' ಎಂದು ಕಾತ್ಯಾಯನ್ ಹೇಳಿದ್ದಾರೆ.