ಢಾಕಾ: ಮಹತ್ವದ ಬೆಳವಣಿಗೆಯಲ್ಲಿ, ಬಾಂಗ್ಲಾದೇಶ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಒಬೇದುಲ್ಲಾ ಹಸನ್ ಅವರು ಶನಿವಾರ ರಾಜೀನಾಮೆ ನೀಡಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನತ್ತ ಮೆರವಣಿಗೆ ಆರಂಭಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಹಸನ್ ಹಾಗೂ ಇತರ ನ್ಯಾಯಮೂರ್ತಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು 'ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಚಳವಳಿ' ಮುಖಂಡರು ಒತ್ತಾಯಿಸಿದ್ದರು. ಮಧ್ಯಾಹ್ನ 1ಗಂಟೆ ಒಳಗೆ ರಾಜೀನಾಮೆ ನೀಡುವಂತೆ ಸಂಘಟನೆ ಸಮನ್ವಯಕಾರ ಹಸ್ನತ್ ಅಬ್ದುಲ್ಲಾ ಗಡುವು ನೀಡಿದ್ದರು.
1 ಗಂಟೆ ವೇಳೆಗೆ, ಮುಖ್ಯನ್ಯಾಯಮೂರ್ತಿ ಹಸನ್ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು.
ಹಸನ್ ಅವರ ರಾಜೀನಾಮೆ ಕುರಿತಂತೆ, ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಪ್ರೊ.ಆಸಿಫ್ ನಜ್ರುಲ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
'ನಮ್ಮ ಮುಖ್ಯ ನ್ಯಾಯಮೂರ್ತಿ ಕೆಲ ನಿಮಿಷಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅವರ ರಾಜೀನಾಮೆ ಪತ್ರ ಈಗಾಗಲೇ ಕಾನೂನು ಸಚಿವಾಲಯ ತಲುಪಿದೆ' ಎಂದು ಅವರು ಪೋಸ್ಟ್ ಮಾಡಿದ್ದಾರೆ.
'ಮುಖ್ಯ ನ್ಯಾಯಮೂರ್ತಿ ಸಲ್ಲಿಸಿರುವ ರಾಜೀನಾಮೆ ಪತ್ರ ಮಾತ್ರ ನಮಗೆ ತಲುಪಿದೆ. ಉಳಿದ ನ್ಯಾಯಮೂರ್ತಿಗಳ ರಾಜೀನಾಮೆ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಮುಖ್ಯ ನ್ಯಾಯಮೂರ್ತಿಗಳ ರಾಜೀನಾಮೆ ಪತ್ರವನ್ನು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರಿಗೆ ಕಳುಹಿಸಿ ಕೊಡಲಾಗಿದೆ' ಎಂದೂ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸಭೆ ರದ್ದು: ಇದಕ್ಕೂ ಮುನ್ನ, ತಮ್ಮ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ ಬೆನ್ನಲ್ಲೇ, ಮುಖ್ಯ ನ್ಯಾಯಮೂರ್ತಿ ಹಸನ್ ಅವರು ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳ ಸಭೆ ನಡೆಸಲು ಮುಂದಾಗಿದ್ದರು.
ಈ ಸುದ್ದಿ ತಿಳಿಯುತ್ತಿದ್ದಂತೆಯೇ, ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನತ್ತ ಮೆರವಣಿಗೆಯಲ್ಲಿ ಹೊರಟರು.
'ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷಕ್ಕೆ ನಿಷ್ಠರಾಗಿರುವ ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ನ್ಯಾಯಮೂರ್ತಿಗಳು ಕೂಡಲೇ ರಾಜೀನಾಮೆ ನೀಡಬೇಕು. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು' ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನತ್ತ ಮೆರವಣಿಗೆಯಲ್ಲಿ ಹೊರಟಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ, ನ್ಯಾಯಮೂರ್ತಿಗಳೊಂದಿಗಿನ ಸಭೆಯನ್ನು ಮುಖ್ಯ ನ್ಯಾಯಮೂರ್ತಿ ಹಸನ್ ರದ್ದುಗೊಳಿಸಿ, ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು.
ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ಕಟ್ಟಡ ಹಾಗೂ ಇತರ ಕಟ್ಟಡಗಳಿಗೆ ಭಾರಿ ಭದ್ರತೆ ಒದಗಿಸಲಾಗಿತ್ತು. ಯೋಧರನ್ನು ನಿಯೋಜಿಸಲಾಗಿತ್ತು.